ಇಲ್ಲಂದು (ತೆಲಂಗಾಣ): ತೆಲಂಗಾಣದ ಬುಡಕಟ್ಟು ಪ್ರದೇಶ ಹಾಗೂ ಸಾಮಾನ್ಯ ಟೈಲರ್ವೊಬ್ಬರ ಮಗಳು ನ್ಯಾಯಾಧೀಶೆಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಛಲವೊಂದಿದ್ದರೆ ಯಾವುದೂ ಅಸಾಧ್ಯವಲ್ಲ ಎಂಬುದನ್ನು ನಿರೂಪಿಸಿರುವ ಈ ಯುವತಿ, ಭದ್ರಾದ್ರಿ ಕೊತಗುಡೆಂ ಜಿಲ್ಲೆಯ ಇಲ್ಲಂದು ಬುಡಕಟ್ಟು ಪ್ರದೇಶದ ಮೊದಲ ನ್ಯಾಯಾಧೀಶೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಹರಿಕಾ ಎಂಬುವವರೇ ನ್ಯಾಯಾಧೀಶೆಯಾಗಿ ಆಯ್ಕೆಯಾದ ಬುಡಕಟ್ಟು ಪ್ರದೇಶದ ಸಾಧಕಿ. ಸಂಕಲ್ಪ ಬಲವೊಂದಿದ್ದರೆ ಅಸಾಧ್ಯವಾದುದು ಯಾವುದೂ ಇಲ್ಲ ಎಂಬ ಅಪ್ಪನ ಮಾತಿನಿಂದ ಸ್ಪೂರ್ತಿ ಪಡೆದ ಹರಿಕಾ ಸತತವಾಗಿ ಪ್ರಯತ್ನಪಟ್ಟು ತನ್ನ ಗುರಿ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಗ್ರಾಮೀಣ ಭಾಗದ ಅದರಲ್ಲೂ ಬುಡಕಟ್ಟು ಪ್ರದೇಶದ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ. ಪ್ರತಿಭೆ ಹಾಗೂ ಜ್ಞಾನ ಯಾರ ಸ್ವತ್ತು ಕೂಡ ಅಲ್ಲ ಎಂಬುದನ್ನೂ ಹರಿಕಾ ನಿರೂಪಿಸಿದ್ದಾರೆ.
ಲಕ್ಷ್ಮಯ್ಯ ಮತ್ತು ಸ್ವರೂಪಾ ದಂಪತಿಯ ಮೂವರು ಪುತ್ರಿಯರಲ್ಲಿ ಹರಿಕಾ ಕೂಡ ಒಬ್ಬರು. ತಂದೆ ಟೈಲರ್ ಕೆಲಸ ಮಾಡಿಕೊಂಡು ಕುಟುಂಬವನ್ನು ಪೋಷಿಸುತ್ತಿದ್ದರು. ಈ ಸಮಯದಲ್ಲಿ ಭದ್ರಾದ್ರಿ ಕೊತಗುಡೆಂ ಜಿಲ್ಲೆಯ ಇಲ್ಲಂದು ಪ್ರದೇಶದಲ್ಲಿ ತಮ್ಮ ಮನೆಯ ಪಕ್ಕದಲ್ಲಿ ನ್ಯಾಯಾಲಯ ಇದೆ. ಅಲ್ಲಿಗೆ ಬರುತ್ತಿದ್ದ ವಕೀಲರು ಮತ್ತು ನ್ಯಾಯಾಧೀಶರನ್ನು ನೋಡಿ ತನ್ನ ಮಕ್ಕಳಲ್ಲಿ ಒಬ್ಬರನ್ನಾದರೂ ನ್ಯಾಯಾಧೀಶರನ್ನಾಗಿ ಮಾಡಬೇಕೆಂಬ ಸಂಕಲ್ಪವನ್ನು ತಂದೆ ಲಕ್ಷ್ಮಯ್ಯ ಮಾಡಿದ್ದರು. ತಂದೆಯ ಕನಸನ್ನು ಹರಿಕಾ ನನಸು ಮಾಡಿ ಸೈ ಎನಿಸಿಕೊಂಡಿದ್ದಾರೆ.
ಟೈಲರ್ ಕೆಲಸ ಮಾಡುತ್ತಿದ್ದಾಗಲೇ ಲಕ್ಷ್ಮಯ್ಯ ಅವರಿಗೆ ಸಿಂಗರೇಣಿ ಕಲ್ಲಿದ್ದಲು ಗಣಿ ಕಂಪನಿಯಲ್ಲಿ ಕೆಲಸ ಸಿಕ್ಕಿತ್ತು. ಅಲ್ಲಿ 20 ವರ್ಷಗಳ ಕಾಲ ಕೆಲಸ ಮಾಡಿ, ನಂತರ ಇಲ್ಲಂದು ಸ್ವಗ್ರಾಮಕ್ಕೆ ಮರಳಿದ್ದರು. ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿದ್ದ ಲಕ್ಷ್ಮಯ್ಯ, ಎಲ್ಲರಿಗೂ ಚೆನ್ನಾಗಿ ಓದಿಸುತ್ತಿದ್ದರು. ತಂದೆಯ ಕಲ್ಪನೆಯಂತೆ ಹರಿಕಾ ಬಾಲ್ಯದಿಂದಲೂ ವಿದ್ಯಾಭ್ಯಾಸದಲ್ಲಿ ತುಂಬಾ ಆಸಕ್ತಿಯಿಂದ ಕಲಿಯುತ್ತಿದ್ದರು. ತಮ್ಮ ವಿದ್ಯಾಭ್ಯಾಸವನ್ನು ಗೋದಾವರಿಖನಿ ಮತ್ತು ಕೊತಗುಡೆಂನಲ್ಲಿ ಮಾಡಿ ನಂತರ ಹರಿಕಾ, ಕಾಕತೀಯ ವಿಶ್ವವಿದ್ಯಾಲಯದಿಂದ ಬಿಎ, ಎಲ್ಎಲ್ಬಿ ಪದವಿ ಪಡೆದರು. ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಎಲ್ಎಲ್ಎಂ ಮುಗಿಸಿದ್ದಾರೆ.
2022ರಲ್ಲಿ ಕಿರಿಯ ಸಿವಿಲ್ ನ್ಯಾಯಾಧೀಶರ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿತ್ತು. ಇದಕ್ಕಾಗಿ ಹರಿಕಾ ಹಗಲು-ರಾತ್ರಿ ಶ್ರಮಪಟ್ಟು ತಯಾರಿಸಿ ಮಾಡಿಕೊಂಡಿದ್ದರು. ಸಾವಿರಾರು ಜನ ಆಕಾಂಕ್ಷಿಗಳಲ್ಲಿ ಹರಿಕಾ ನ್ಯಾಯಧೀಶರಾಗಿ ಆಯ್ಕೆಯಾಗಿದ್ದರು. ಸದ್ಯ ವಾರಂಗಲ್ನ ಮೂರನೇ ಹೆಚ್ಚುವರಿ ಕಿರಿಯ ಸಿವಿಲ್ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಮ್ಮ ಮುಂದೆ ಒಂದು ನಿರ್ದಿಷ್ಟ ಗುರಿ ಇದೆ. ಅದಕ್ಕೆ ತಕ್ಕಂತ ಪರಿಶ್ರಮ ಪಟ್ಟರೆ ಖಂಡಿತವಾಗಿ ಪ್ರತಿಫಲ ಸಿಗಲಿದೆ. ನಮ್ಮ ತಂದೆ-ತಾಯಿಯ ಕನಸನ್ನು ನನಸು ಮಾಡಲು ಸಾಧ್ಯವಾಗುತ್ತದೆ. ಇದಕ್ಕಾಗಿ ಸೋಲಿನ ಬಗ್ಗೆ ಯೋಚಿಸದೆ ತಾಳ್ಮೆಯಿಂದ ತಮ್ಮ ಪ್ರಯತ್ನ ಮುಂದುವರೆಸುವುದು ಮಾತ್ರ ಮುಖ್ಯ ಎಂದು ಹರಿಕಾ ಹೇಳುತ್ತಾರೆ.
ಇದನ್ನೂ ಓದಿ:ಒಂದು ದಿನ ಕೂಲಿ ಕೆಲಸ.. ಇನ್ನೊಂದು ದಿನ ಕಾಲೇಜು.. ಕೆಮಿಸ್ಟ್ರಿಯಲ್ಲಿ ಪಿಎಚ್ಡಿ.. ಬಡತನದಲ್ಲಿ ಅರಳಿದ ಭಾರತಿ ಈಗ ಡಾಕ್ಟರ್!