ಭುವನೇಶ್ವರ (ಒಡಿಶಾ): ದೇಶಕ್ಕಾಗಿ ಹೋರಾಡುವ ಹಠ ಇರಬೇಕೇ ಹೊರತು ಹೆಣ್ಣು ಗಂಡೆಂಬ ಭೇದವಿರಬಾರದು ಎಂಬುದನ್ನು ಅಗ್ನಿವೀರ ಮಹಿಳೆಯರು ಸಾಬೀತು ಮಾಡಿದ್ದಾರೆ. ದೇಶಾದ್ಯಂತ ನೌಕಾಪಡೆಗೆ ಅರ್ಜಿ ಸಲ್ಲಿಸಿದ್ದ 82,000 ಮಂದಿಯ ಪೈಕಿ 273 ಮಹಿಳೆಯರು ಅಗ್ನಿಪಥ್ ಯೋಜನೆಯ ಭಾಗವಾಗಿ ನೌಕಾಪಡೆ ತರಬೇತಿಗೆ ಅರ್ಹತೆ ಪಡೆದಿದ್ದರು. ಇವರೆಲ್ಲರೂ ಒಡಿಶಾದ ಐಎನ್ಎಸ್ ಚಿಲ್ಕಾದಲ್ಲಿ 16 ವಾರಗಳ ಕಾಲ ವಿವಿಧ ರೀತಿಯ ಕಠಿಣ ತರಬೇತಿ ಮುಗಿಸಿದ್ದಾರೆ.
ನೌಕಾ ಸೇನೆಯ ನಾವಿಕರಾಗಿ ಮಹಿಳೆಯರಿಗೆ ಇದು ಚೊಚ್ಚಲ ಅವಕಾಶ. ಇದರೊಂದಿಗೆ, INS ವಿಶೇಷವಾಗಿ ಮಹಿಳಾ ಪ್ರಶಿಕ್ಷಣಾರ್ಥಿಗಳ ಅಗತ್ಯತೆ ಮತ್ತು ಸೌಲಭ್ಯಗಳ ಮೇಲೆ ಗಮನ ಕೇಂದ್ರೀಕರಿಸಿದೆ. ಇವರಿಗಾಗಿ ವಿಶೇಷ ಕೊಠಡಿಗಳು ಮತ್ತು ಊಟದ ಹಾಲ್‌ಗಳ ವ್ಯವಸ್ಥೆ ಮಾಡಲಾಗಿದೆ. ಸ್ಯಾನಿಟರಿ ಪ್ಯಾಡ್ ವೆಂಡಿಂಗ್ ಮೆಷಿನ್ಗಳು, ಬಳಸಿದ ವಸ್ತುಗಳನ್ನು ಪರಿಸರಸ್ನೇಹಿಯಾಗಿ ನಾಶಪಡಿಸಿ ಬಿಸಾಡಬಹುದಾದ ಯಂತ್ರಗಳು, ರಕ್ಷಣೆಗಾಗಿ ಭದ್ರತಾ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು.
ಈಜು ತರಬೇತುದಾರರಾಗಿ ತರಬೇತಿ ಪಡೆದ ಮಹಿಳೆಯರನ್ನು ನೇಮಿಸಿಕೊಳ್ಳಲಾಗುತ್ತಿದೆ. ಭವಿಷ್ಯದ ಅಗತ್ಯತೆಗಳು ಮತ್ತು ಮಹಿಳಾ ಸಬಲೀಕರಣವನ್ನು ಗಮನದಲ್ಲಿಟ್ಟುಕೊಂಡು ನೌಕಾಪಡೆಯು ಈ ದಿಕ್ಕಿನಲ್ಲಿ ಹೆಜ್ಜೆಗಳನ್ನು ಇಡುತ್ತಿದೆ. ಇಲ್ಲಿ ತರಬೇತಿ ಸ್ವೀಕರಿಸಿದ ಮಹಿಳೆಯರು ಕಾರ್ಯಾಚರಣೆಯ ಕರ್ತವ್ಯಗಳಲ್ಲಿ ಮತ್ತು ಮುಂಚೂಣಿ ಯುದ್ಧನೌಕೆಗಳಲ್ಲಿ ಪುರುಷರೊಂದಿಗೆ ಸಮಾನವಾಗಿ ಕೆಲಸ ಮಾಡಲಿದ್ದಾರೆ ಎಂದು ನೌಕಾಪಡೆ ಕಮಾಂಡರ್ ಗೌರಿ ಮಿಶ್ರಾ ಹೇಳಿದರು.
ತರಬೇತಿ ಪೂರ್ಣಗೊಳಿಸಿದವರಲ್ಲಿ ಪಠಾಣ್‌ಕೋಟ್‌ನ 19 ವರ್ಷದ ಖುಷಿ ಪಠಾನಿಯಾ ಅತ್ಯುತ್ತಮ ಮಹಿಳಾ ಅಗ್ನಿಶಾಮಕ ದಳದ ಜನರಲ್ ಬಿಪಿನ್ ರಾವತ್ ಟ್ರೋಫಿ ಪಡೆದರು. ಇವರ ಅಜ್ಜ ಸುಬೇದಾರ್ ಮೇಜರ್ ಆಗಿ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ತಂದೆ ಕೃಷಿಕರು ಮತ್ತೊಬ್ಬ ಯುವತಿ 19 ವರ್ಷದ ಹಿಶಾ ಬಾಘೆಲ್ ತನ್ನ ಪ್ರೀತಿಯ ತಂದೆಯ ಕನಸು ನನಸಾಗಿಸಲು ಯುದ್ಧಭೂಮಿ ಪ್ರವೇಶಿಸುತ್ತಿದ್ದಾರೆ.