ಫರೂಕಾಬಾದ್ (ಉತ್ತರ ಪ್ರದೇಶ): ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರು ಪ್ರಮುಖವಾಗಿರುತ್ತದೆ. ಹೀಗಾಗಿಯೇ ಯಾವುದೇ ಹಬ್ಬ- ಹರಿ ದಿನಗಳು ಬಂದ ತಕ್ಷಣ ಪೊಲೀಸರ ರಜೆಗಳು ಮೊದಲು ರದ್ದಾಗುತ್ತವೆ. ಇದರಿಂದ ಜನರ ಮಧ್ಯೆ ಕರ್ತವ್ಯ ನಿರ್ವಹಿಸುತ್ತಲೇ ಪೊಲೀಸರು ತಮ್ಮ ಹಬ್ಬದ ದಿನಗಳನ್ನು ಕಳೆಯಬೇಕಾಗುತ್ತದೆ. ಇದರ ನಡುವೆ ಉತ್ತರ ಪ್ರದೇಶದ ಫರೂಕಾಬಾದ್ನಲ್ಲಿ ಇನ್ಸ್‌ಪೆಕ್ಟರ್ ಒಬ್ಬರು ಬರೆದು ರಜೆ ಚೀಟಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೌದು, ಹೋಳಿ ಹಬ್ಬದ ನಿಮಿತ್ತ ಇಲ್ಲಿನ ಇನ್ಸ್‌ಪೆಕ್ಟರ್ 10 ದಿನಗಳ ರಜೆ ಕೋರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆದಿದ್ದು, ರಜೆಗಾಗಿ ಹೇಳಿರುವ ಕಾರಣ ತುಂಬಾ ತಮಾಷೆ ಹಾಗೂ ವಿಚಿತ್ರವಾಗಿದೆ. 22 ವರ್ಷಗಳಿಂದ ನನ್ನ ಪತ್ನಿ ಹೋಳಿ ಹಬ್ಬಕ್ಕೆ ತವರು ಮನೆಗೆ ಹೋಗಲು ಸಾಧ್ಯವಾಗಿಲ್ಲ. ಆದ್ದರಿಂದ ನನಗೆ ರಜೆ ಮಂಜೂರು ಮಾಡಬೇಕೆಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಹಾಗಾಗಿ, ಸೋಷಿಯಲ್ ಮೀಡಿಯಾದಲ್ಲಿ ಈ ಪತ್ರವು ಸಾಕಷ್ಟು ಹರಿದಾಡುತ್ತಿದೆ.
ಪತ್ನಿ ಕೋಪಕೊಂಡಿದ್ದಾಳೆ: ಫರೂಕಾಬಾದ್ ವಿಶೇಷ ತನಿಖಾ ಕೋಶದ ಉಸ್ತುವಾರಿಯಾಗಿರುವ ಇನ್ಸ್‌ಪೆಕ್ಟರ್, ತಮ್ಮ ಪೊಲೀಸ್ ಅಧೀಕ್ಷಕ ಅಶೋಕ್ ಕುಮಾರ್ ಮೀನಾ ಅವರಿಗೆ ತಮ್ಮ ಕಳೆದ ಬುಧವಾರ ರಜೆ ಅರ್ಜಿ ಸಲ್ಲಿಸಿದ್ದಾರೆ. ''ಮದುವೆಯಾದ 22 ವರ್ಷಗಳಿಂದ ಹೋಳಿ ಸಂದರ್ಭದಲ್ಲಿ ಪತ್ನಿ ತವರು ಮನೆಗೆ ತೆರಳಿಲ್ಲ. ಇದೇ ಕಾರಣದಿಂದ ನನ್ನ ಮೇಲೆ ಪತ್ನಿಯ ತುಂಬಾ ಕೋಪಕೊಂಡಿದ್ದಾಳೆ. ಅಲ್ಲದೇ, ಹೋಳಿ ಹಬ್ಬಕ್ಕೆ ತನ್ನ ತಾಯಿಯ ಮನೆಗೆ ಹೋಗಬೇಕೆಂದು ನನ್ನ ಪತ್ನಿ ಹಠ ಹಿಡಿದಿದ್ದಾಳೆ'' ಎಂದು ಇನ್ಸ್‌ಪೆಕ್ಟರ್ ಹೇಳಿಕೊಂಡಿದ್ದಾರೆ.
ಅಲ್ಲದೇ, ''ತನ್ನೊಂದಿಗೆ ನನ್ನನ್ನು ಕೂಡ ತನ್ನೊಂದಿಗೆ ಕರೆದುಕೊಂಡು ಹೋಗಲು ನನ್ನ ಪತ್ನಿ ಬಯಸಿದ್ದಾರೆ. ಈ ಕಾರಣಕ್ಕಾಗಿ ರಜೆಯ ಅವಶ್ಯಕತೆಯಿದೆ. ಈ ಸಮಸ್ಯೆಯನ್ನು ಸಹಾನುಭೂತಿಯಿಂದ ಪರಿಗಣಿಸಿ, ದಯವಿಟ್ಟು ಮಾರ್ಚ್ 4ರಿಂದ 10 ದಿನಗಳ ಕಾಲ ರಜೆಯನ್ನು ಮಂಜೂರು ಮಾಡಬೇಕೆಂದು ವಿನಮ್ರ ವಿನಂತಿ'' ಎಂದು ಇನ್ಸ್‌ಪೆಕ್ಟರ್ ತಮ್ಮ ಪತ್ರದಲ್ಲಿ ಬರೆದಿದ್ದಾರೆ.
ಇನ್ಸ್‌ಪೆಕ್ಟರ್ ಮೇಲೆ ಕೃಪೆ ತೋರಿದ ಎಸ್ಪಿ: ಮತ್ತೊಂದೆಡೆ, ರಜೆಗಾಗಿ ಇನ್ಸ್‌ಪೆಕ್ಟರ್ ಬರೆದಿರುವ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಎಸ್ಪಿ ಅಶೋಕ್ ಕುಮಾರ್ ಮೀನಾ ಕೃಪೆ ತೋರಿದ್ದಾರೆ. ಗುರುವಾರ ಈ ರಜೆ ಪತ್ರ ತಮ್ಮ ಕಚೇರಿಗೆ ತಲುಪಿದಾಗ, ರಜೆಗಾಗಿ ನೀಡಿದ ಕಾರಣ ಮತ್ತು ಆ ಪತ್ರವನ್ನು ಓದಿ ಮುಗುಳ್ನಕ್ಕಿದ್ದಾರೆ. ಇದೇ ವೇಳೆ, 10 ದಿನಗಳ ಬದಲಿಗೆ ಇನ್ಸ್ಪೆಕ್ಟರ್ಗೆ ಐದು ದಿನಗಳ ರಜೆ ಮಂಜೂರು ಮಾಡಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಡಿಸೆಂಬರ್ 5ರ ರಾತ್ರಿ 8 ಗಂಟೆಗೆ ತಾಯಿ ನಿಧನವಾಗಲಿದ್ದಾರೆ, ಎರಡು ದಿನ ರಜೆ ಬೇಕು: ಶಿಕ್ಷಕನ ಪತ್ರ ವೈರಲ್
ಈ ಹಿಂದೆ ಬಿಹಾರದಲ್ಲೂ ಇಂತಹ ವಿಚಿತ್ರ ರಜೆ ಪತ್ರಗಳು ಸಾಕಷ್ಟು ಸದ್ದು ಮಾಡಿದ್ದವು. ತನ್ನ ತಾಯಿ ನಿಧನವಾಗಲಿದ್ದಾರೆ ಎಂದು ಹೇಳಿಕೊಂಡು ಮುಂಚಿತವಾಗಿಯೇ ರಜೆಯನ್ನು ಕೋರಿ ಶಿಕ್ಷಕರೊಬ್ಬರು ಪತ್ರ ಬರೆದಿದ್ದರು. ಮತ್ತೊಬ್ಬರು, ಅನಾರೋಗ್ಯಕ್ಕೀಡಾಗುವ ಮೊದಲೇ ನನಗೆ ರಜೆ ನೀಡಬೇಕೆಂದು ಹೇಳಿ ರಜೆ ಪತ್ರ ಬರೆದಿದ್ದರು. ಮದುವೆ ಸಮಾರಂಭಕ್ಕೆ ನಾನು ಹೋಗುತ್ತಿದ್ದೇನೆ. ಅಲ್ಲಿ ನಾನು ತುಂಬಾ ಊಟ ಮಾಡುವ ಕಾರಣದಿಂದ ನಾನು ನನಗೆ ಹೊಟ್ಟೆನೋವು ಬರುವ ಸಾಧ್ಯತೆ ಇದೆ. ಹೀಗಾಗಿ ನನಗೆ ರಜೆ ನೀಡಬೇಕೇಂದು ಇನ್ನೋರ್ವ ಶಿಕ್ಷಕ ಪತ್ರ ಬರೆದಿದ್ದರು.