ಕರ್ನಾಟಕ

karnataka

ETV Bharat / bharat

ಯುಎಪಿಎ ಕಾನೂನಿನ ನೆರಳಲ್ಲಿ ಅನ್ಯಾಯದ ಪರಮಾವಧಿ: ಇದಕ್ಕೆ ಕೊನೆ ಎಂದು? - ಮಾನವ ಹಕ್ಕುಗಳನ್ನು ಹೇಗೆ ಸಂಪೂರ್ಣವಾಗಿ ಉಲ್ಲಂಘನೆ ಮಾಡಲಾಗುತ್ತಿದೆ

ಸಾಂವಿಧಾನಿಕ ರೀತಿಯಲ್ಲಿ ಕಾನೂನುಬಾಹಿರ ಚಟುವಟಿಕೆಗಳ ವಿರುದ್ಧ ಕ್ರಮ ಕೈಗೊಳ್ಳಬಹುದಾದ ಹಲವಾರು ಕಾನೂನುಗಳು ಈಗಾಗಲೇ ಜಾರಿಯಲ್ಲಿರುವಾಗ, ಬದುಕುವ ಹಕ್ಕನ್ನೇ ಕಸಿಯುವ ವಿಶೇಷ ಕಾನೂನಿನ ಅಗತ್ಯ ಇತ್ತಾ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ವೈಯಕ್ತಿಕ ಸ್ವಾತಂತ್ರ್ಯ ಮತ್ತು ವಿರುದ್ಧ ದೃಷ್ಟಿಕೋನದ ವಿರುದ್ಧ ಸರ್ಕಾರದ ಅಸಹಿಷ್ಣುತೆ ಅಪಾಯಕಾರಿ. ಅಲ್ಲದೆ ಇದು ರಾಷ್ಟ್ರೀಯ ಐಕ್ಯತೆಗೆ ಸವಾಲಾಗಿ ಪರಿಣಮಿಸುತ್ತದೆ.

Injustice under the shadow of UAPA law
ಯುಎಪಿಎ ಕಾನೂನಿನ ನೆರಳಲ್ಲಿ ಅನ್ಯಾಯದ ಪರಮಾವಧಿ.. ಇದಕ್ಕೆ ಕೊನೆ ಎಂದು?

By

Published : Aug 11, 2022, 3:32 PM IST

ಆಡಳಿತ ನಡೆಸುವುದು ಎಂದರೆ ಜನರನ್ನು ಬೆದರಿಸುವುದಲ್ಲ. ಜನರ ಧ್ವನಿಗೆ ಚ್ಯುತಿ ತರುವುದು ಪ್ರಜಾಪ್ರಭುತ್ವವಲ್ಲ. ಪ್ರಜಾಸತ್ತಾತ್ಮಕ ರಾಜಕೀಯದ ಆಡಳಿತಗಾರರು ತಮ್ಮೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವವರ ರಾಜಕೀಯ ಸ್ವಾತಂತ್ರ್ಯವನ್ನು ಗೌರವಿಸಬೇಕು. ಸರ್ಕಾರದ ನೀತಿಗಳಲ್ಲಿನ ಕೊರತೆಗಳ ಬಗ್ಗೆ ಎಲ್ಲರೂ ನಿರ್ಭೀತಿಯಿಂದ ಮಾತನಾಡಲು ಸಾಧ್ಯವಾಗುವಂಥ ವಾತಾವರಣವನ್ನು ಅವರು ಸೃಷ್ಟಿಸಬೇಕು. ಜನರ ಕುಂದುಕೊರತೆಗಳನ್ನು ತಾಳ್ಮೆಯಿಂದ ಆಲಿಸುವ ಮತ್ತು ಅವುಗಳಿಗೆ ಸಮಯೋಚಿತ ಪರಿಹಾರ ನೀಡುವ ವ್ಯವಸ್ಥೆಯನ್ನು ರಚಿಸಬೇಕು.

ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವವು ರಾಜಕೀಯ ಮುಖಂಡರ ನಿರರ್ಗಳ ಭಾಷಣಗಳಲ್ಲಿ ಮತ್ತು ಪುಸ್ತಕಗಳಲ್ಲಿ ಹೊಳೆಯುತ್ತಿದೆ. ಆದಾಗ್ಯೂ ವಾಸ್ತವ ಮಾತ್ರ ಸಂಪೂರ್ಣ ವಿಭಿನ್ನವಾಗಿದೆ. ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆಯ (Unlawful Activities Prevention Act -UAPA) ದುರುಪಯೋಗವು ಇದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ. ಭಿನ್ನಾಭಿಪ್ರಾಯದ ಧ್ವನಿಯನ್ನು ಹತ್ತಿಕ್ಕಲು ಅಧಿಕಾರದಲ್ಲಿರುವ ಸರಕಾರಗಳು ಈ ಕಾನೂನನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ. ಭಯೋತ್ಪಾದಕ ಚಟುವಟಿಕೆಗಳು ಮತ್ತು ಸರ್ಕಾರದೊಂದಿಗೆ ಭಿನ್ನಾಭಿಪ್ರಾಯ ಹೊಂದುವ ಸಾಂವಿಧಾನಿಕ ಹಕ್ಕನ್ನು ಪ್ರತಿಪಾದಿಸುವ ಚಟುವಟಿಕೆಗಳನ್ನು ಪ್ರತ್ಯೇಕಿಸುವ ರೇಖೆಯನ್ನು ಸರ್ಕಾರವು ಅಳಿಸುತ್ತಿದೆ ಎಂದು ಕಳೆದ ವರ್ಷ ದೆಹಲಿ ಹೈಕೋರ್ಟ್ ಹೇಳಿತ್ತು. ಹೈಕೋರ್ಟ್​ನ ಈ ಅವಲೋಕನವು ಎದುರಾಳಿ ಧ್ವನಿಗಳ ಸುತ್ತ ಕುಣಿಕೆಯನ್ನು ಬಿಗಿಗೊಳಿಸುವುದನ್ನು ಎತ್ತಿ ತೋರಿಸುತ್ತದೆ.

2018 ಮತ್ತು 2020 ರ ನಡುವೆ ಯುಎಪಿಎ ಅಡಿಯಲ್ಲಿ ಒಟ್ಟು 4690 ಜನರನ್ನು ಬಂಧಿಸಲಾಗಿದ್ದು, ಅದರಲ್ಲಿ ಕೇವಲ 149 ಜನ ಮಾತ್ರ ಅಪರಾಧಿಗಳೆಂದು ಘೋಷಿತರಾಗಿದ್ದಾರೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಬಹಿರಂಗಪಡಿಸಿದೆ. 2014 ರಿಂದ ಏಳು ವರ್ಷಗಳ ಅವಧಿಯಲ್ಲಿ 10,552 ಜನರನ್ನು ಈ ಕಾಯಿದೆಯ ಅಡಿಯಲ್ಲಿ ಬಂಧಿಸಲಾಗಿದೆ. ಆದರೆ, ಅವರಲ್ಲಿ 253 ಮಂದಿಗೆ ಮಾತ್ರ ಶಿಕ್ಷೆಯಾಗಿದೆ. ಪೊಲೀಸ್ ಮತ್ತು ರಾಜಕಾರಣಿಗಳ ನಂಟಿನಿಂದ ಮಾನವ ಹಕ್ಕುಗಳನ್ನು ಹೇಗೆ ಸಂಪೂರ್ಣವಾಗಿ ಉಲ್ಲಂಘನೆ ಮಾಡಲಾಗುತ್ತಿದೆ ಎಂಬುದನ್ನು ಈ ಅಂಕಿಅಂಶಗಳು ಬಹಿರಂಗಪಡಿಸುತ್ತವೆ.

ಭಯೋತ್ಪಾದನೆ ಆರೋಪದ ಮೇಲೆ 1996 ರಲ್ಲಿ ಮೊಹಮ್ಮದ್ ಅಲಿ ಭಟ್, ಲತೀಫ್ ಅಹ್ಮದ್ ವಾಜಾ ಮತ್ತು ಮಿರ್ಜಾ ನಿಸ್ಸಾರ್ ಹುಸೇನ್ ಎಂಬ ಮೂವರು ಕಾಶ್ಮೀರಿ ಯುವಕರನ್ನು ಬಂಧಿಸಲಾಗಿತ್ತು. 26 ವರ್ಷಗಳ ಕಾಲ ಜೈಲುವಾಸದ ನಂತರ ಅವರನ್ನು ಖುಲಾಸೆಗೊಳಿಸಲಾಯಿತು. ಅವರ ವಿರುದ್ಧದ ಆರೋಪಗಳನ್ನು ದೆಹಲಿ ಮತ್ತು ರಾಜಸ್ಥಾನ ನ್ಯಾಯಾಲಯಗಳು ರದ್ದುಗೊಳಿಸಿದ್ದವು. ಆದರೆ ಅವರು ಜೈಲಿನಲ್ಲಿ ಕಳೆದ ತಮ್ಮ ಜೀವನದ ಅಮೂಲ್ಯ ವರ್ಷಗಳನ್ನು ಅವರಿಗೆ ಹಿಂದಿರುಗಿಸುವುದು ಹೇಗೆ? ಭಯೋತ್ಪಾದನೆಯ ವಿರುದ್ಧ ಹೋರಾಟ ಎಂದರೆ ಅಮಾಯಕರನ್ನು ಕಿರುಕುಳಕ್ಕೆ ಒಳಪಡಿಸುವುದೇ?

ಐಜಾಜ್ ಬಾಬಾ ಎಂಬ ಇನ್ನೊಬ್ಬ ಕಾಶ್ಮೀರಿಯನ್ನು 2010 ರಲ್ಲಿ ಗುಜರಾತ್ ಪೊಲೀಸರು ಯುಎಪಿಎ ಅಡಿಯಲ್ಲಿ ಬಂಧಿಸಿದ್ದರು. 11 ವರ್ಷಗಳ ನಂತರ, ಸ್ಥಳೀಯ ನ್ಯಾಯಾಲಯವು ಆತ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾನೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿ ಆತನನ್ನು ಬಿಡುಗಡೆ ಮಾಡಲು ಆದೇಶಿಸಿತು.

ಮೊಹಮ್ಮದ್ ಇಲಿಯಾಸ್ ಮತ್ತು ಇರ್ಫಾನ್ ಎಂಬುವರನ್ನು 2012 ರಲ್ಲಿ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳವು ಬಂಧಿಸಿತ್ತು. ರಾಜಕೀಯ ಮುಖಂಡರು, ಪೊಲೀಸ್ ಅಧಿಕಾರಿಗಳು ಮತ್ತು ಪತ್ರಕರ್ತರನ್ನು ಕೊಲ್ಲಲು ಇವರು ಸಂಚು ರೂಪಿಸಿದ್ದರು ಎಂದು ಆರೋಪಿಸಲಾಗಿತ್ತು. ಇವರ ವಿರುದ್ಧ ಯುಎಪಿಎ ಅಡಿಯಲ್ಲಿ ಕೇಸ್ ದಾಖಲಿಸಲಾಗಿತ್ತು. ನಂತರ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೂ ಹಸ್ತಾಂತರಿಸಲಾಗಿತ್ತು. ಅಂತಿಮವಾಗಿ ವಿಶೇಷ ಎನ್‌ಐಎ ನ್ಯಾಯಾಲಯ ಅವರನ್ನು ದೋಷಮುಕ್ತಗೊಳಿಸಿದೆ. ತಮ್ಮ ಜೀವನದ ಒಂಬತ್ತು ಅಮೂಲ್ಯ ವರ್ಷಗಳು ಕಳೆದುಹೋಗಿವೆ ಎಂದು ಸಂತ್ರಸ್ತರು ಅಳಲು ತೋಡಿಕೊಂಡರು. ಅವರ ಕಣ್ಣೀರು ಒರೆಸುವವರು ಯಾರು? ಯುಎಪಿಎ ಅಡಿಯಲ್ಲಿ ಬಂಧಿತರಾದವರಲ್ಲಿ ಶೇಕಡ 50ಕ್ಕೂ ಹೆಚ್ಚು ಮಂದಿ 18 ರಿಂದ 30 ವರ್ಷ ವಯಸ್ಸಿನವರು. ಆರೋಪಿಗಳು ಕತ್ತಲಕೋಣೆಯಲ್ಲಿ ಕೊಳೆಯುತ್ತಿದ್ದರೆ, ಕುಟುಂಬಕ್ಕೆ ಅನ್ನ ದುಡಿದು ಹಾಕುತ್ತಿದ್ದವರನ್ನು ಕಳೆದುಕೊಂಡ ಅವರ ಕುಟುಂಬ ಸದಸ್ಯರ ಜೀವನವೂ ನಾಶವಾಗಿದೆ. ಅನೇಕ ಪ್ರಕರಣಗಳಲ್ಲಿ ನ್ಯಾಯಾಲಯವು ಖುಲಾಸೆಗೊಳಿಸುವ ವೇಳೆಗೆ ಆರೋಪಿಗಳ ಹತ್ತಿರದ ಸಂಬಂಧಿಗಳು ಜೀವಂತವಾಗಿ ಉಳಿದಿರುವುದಿಲ್ಲ.

ಯುಎಪಿಎ ಐದೂವರೆ ದಶಕಗಳ ಹಿಂದೆ ಜಾರಿಗೆ ಬಂದಿತ್ತು. ಯುಪಿಎ ಮತ್ತು ಎನ್‌ಡಿಎ ಸರ್ಕಾರಗಳು 2004, 2008, 2013 ಮತ್ತು 2019 ರಲ್ಲಿ ಕಾಯಿದೆಗೆ ತಿದ್ದುಪಡಿಗಳನ್ನು ಮಾಡಿದವು. ತಿದ್ದುಪಡಿಗಳು ಈ ಕಾನೂನನ್ನು ಮತ್ತಷ್ಟು ಪ್ರಬಲಗೊಳಿಸಿದವು. ಆರೋಪಿಗಳಿಗೆ ಜಾಮೀನು ಪಡೆಯುವುದು ಮತ್ತಷ್ಟು ಕಷ್ಟವಾಗುವಂತೆ ಮಾಡಲಾಯಿತು. ವಾಸ್ತವ ನೋಡಿದರೆ ಈ ಕಾನೂನೇ ಸಾಕಷ್ಟು ಗೊಂದಲಕಾರಿಯಾಗಿದೆ. ಸಾಂವಿಧಾನಿಕ ರೀತಿಯಲ್ಲಿ ಕಾನೂನುಬಾಹಿರ ಚಟುವಟಿಕೆಗಳ ವಿರುದ್ಧ ಕ್ರಮ ಕೈಗೊಳ್ಳಬಹುದಾದ ಹಲವಾರು ಕಾನೂನುಗಳು ಈಗಾಗಲೇ ಜಾರಿಯಲ್ಲಿರುವಾಗ, ಬದುಕುವ ಹಕ್ಕನ್ನೇ ಕಸಿಯುವ ವಿಶೇಷ ಕಾನೂನಿನ ಅಗತ್ಯ ಇತ್ತಾ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ.

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸಿದ್ದಕ್ಕಾಗಿ ದೆಹಲಿ ಪೊಲೀಸರು ದೇವಾಂಗನಾ ಕಲಿತಾ, ನತಾಶಾ ನರ್ವಾಲ್ ಮತ್ತು ಆಸಿಫ್ ಇಕ್ಬಾಲ್ ಎಂಬ ವಿದ್ಯಾರ್ಥಿ ನಾಯಕರನ್ನು ಯುಎಪಿಎ ಅಡಿಯಲ್ಲಿ ಬಂಧಿಸಿದ್ದಾರೆ. ಪೊಲೀಸರು ಯುಎಪಿಎ ಕಾನೂನು ಜಾರಿಗೊಳಿಸುವ ಕ್ರಮ ತಪ್ಪಾಗಿದೆ ಎಂದು ಹೇಳಿದ ದೆಹಲಿ ಹೈಕೋರ್ಟ್, ಕಾನೂನಿನ ಇಂಥ ದುರುಪಯೋಗವು ಪ್ರಜಾಪ್ರಭುತ್ವದ ಪತನಕ್ಕೆ ಕಾರಣವಾಗಬಹುದು ಎಂದು ಕಳವಳ ವ್ಯಕ್ತಪಡಿಸಿದೆ. ಜನರಿಂದ ಆಯ್ಕೆಯಾದ ಸರ್ಕಾರಗಳು ಸಮಾಜದಲ್ಲಿ ಅರಾಜಕತೆಯನ್ನು ಸೃಷ್ಟಿಸಲು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಾಗ ಜನರ ವಿಶ್ವಾಸವನ್ನು ಕಳೆದುಕೊಳ್ಳುತ್ತವೆ.

ನ್ಯಾಯಾಲಯಗಳು ಸಾಮಾನ್ಯವಾಗಿ ಇತರ ಕಾನೂನುಗಳ ಅಡಿಯಲ್ಲಿ ದಾಖಲಿಸಲಾದ ಪ್ರಕರಣಗಳಲ್ಲಿನ ಆರೋಪಿಗಳಿಗೆ ಜಾಮೀನು ನೀಡುತ್ತವೆ. ಜಾಮೀನು ನೀಡದಂತೆ ನ್ಯಾಯಾಲಯಗಳ ಕೈಗಳನ್ನು ಕಟ್ಟಿಹಾಕಲು ಟಾಡಾದಂತಹ ಕಾನೂನುಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ 1994 ರಲ್ಲಿ ಹೇಳಿತ್ತು. ಈ ಕಾನೂನನ್ನು ಪೊಲೀಸರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದೂ ಅದು ಹೇಳಿತ್ತು. ಯುಎಪಿಎ ಕೂಡ ಟಾಡಾ ಮಾರ್ಗದಲ್ಲೇ ಮುಂದುವರಿಯುತ್ತಿದೆ.

ಕಳೆದ ವರ್ಷ ತ್ರಿಪುರಾ ಪೊಲೀಸರು ರಾಜ್ಯದಲ್ಲಿ ನಡೆದ ಕೋಮು ಹಿಂಸಾಚಾರದ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ವಕೀಲರು ಮತ್ತು ಪತ್ರಕರ್ತರ ವಿರುದ್ಧ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಎಡಿಟರ್ಸ್ ಗಿಲ್ಡ್ ಈ ಕಾನೂನಿನ ದುರುಪಯೋಗದ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ಯುಎಪಿಎ ಅಡಿಯಲ್ಲಿ ಹೆಚ್ಚಿನ ಪ್ರಕರಣಗಳು ಅಸ್ಸಾಂ, ಜಾರ್ಖಂಡ್, ಮಣಿಪುರ, ತಮಿಳುನಾಡು ಮತ್ತು ಉತ್ತರ ಪ್ರದೇಶದಿಂದ ದಾಖಲಾಗಿವೆ. ವೈಯಕ್ತಿಕ ಸ್ವಾತಂತ್ರ್ಯ ಮತ್ತು ವಿರುದ್ಧ ದೃಷ್ಟಿಕೋನದ ವಿರುದ್ಧ ಸರ್ಕಾರದ ಅಸಹಿಷ್ಣುತೆ ಅಪಾಯಕಾರಿ. ಅಲ್ಲದೆ ಇದು ರಾಷ್ಟ್ರೀಯ ಐಕ್ಯತೆಗೆ ಸವಾಲಾಗಿ ಪರಿಣಮಿಸುತ್ತದೆ.

ಲೇಖಕರು: ಶೈಲೇಶ ನಿಮ್ಮಗಡ್ಡ

ABOUT THE AUTHOR

...view details