ಲಂಡನ್:ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ಪುತ್ರಿ, ಬ್ರಿಟನ್ ಹಣಕಾಸು ಸಚಿವ ರಿಷಿ ಸುನಕ್ ಅವರ ಪತ್ನಿ ಅಕ್ಷತಾ ಮೂರ್ತಿ ಅವರ ಮೇಲೆ ಕೇಳಿ ಬಂದ ತೆರಿಗೆ ವಂಚನೆ ಆರೋಪ ಮತ್ತು ತೆರಿಗೆ ವಿವರಗಳನ್ನು ಸೋರಿಕೆ ಮಾಡಿದ್ದರ ಬಗ್ಗೆ ತನಿಖೆ ನಡೆಸಲು ರಿಷಿ ಸುನಕ್ ಇಂಗ್ಲೆಂಡ್ ಸಂಸತ್ತಿಗೆ ಒತ್ತಾಯಿಸಿದ್ದಾರೆ.
ಅಕ್ಷತಾ ಮೂರ್ತಿ ಅವರ ಸಾಗರೋತ್ತರ ಆದಾಯಕ್ಕೆ ಇಂಗ್ಲೆಂಡ್ನಲ್ಲಿ ತೆರಿಗೆ ಪಾವತಿಸದ ವಿವರಗಳನ್ನು ಸಂಸದರ ಸಿಬ್ಬಂದಿಯೇ ಮಾಧ್ಯಮಗಳಿಗೆ ಸೋರಿಕೆ ಮಾಡಿದ್ದಾರೆ ಎಂಬ ಆರೋಪದ ಬೆನ್ನಲ್ಲೇ ರಿಷಿ ಸುನಕ್ ಈ ಬಗ್ಗೆ ತನಿಖೆ ನಡೆಯಬೇಕು ಎಂದು ಹೇಳಿದ್ದಾರೆ. ಆದರೆ, ಈ ಆರೋಪ ನಿರಾಧಾರ ಎಂದು ಡೌನಿಂಗ್ ಸ್ಟ್ರೀಟ್ ತಿರಸ್ಕರಿಸಿದೆ.
ಸಂಸದ ರಿಷಿ ಸುನಕ್ 2018ರಲ್ಲಿ ಸಂಸದರಾದಾಗ ನೀಡಲಾದ ವೈಯಕ್ತಿಕ ವಿವರಗಳ ಬಗ್ಗೆ ಸಂಸತ್ತಿನ ಕೆಲವೇ ಸಿಬ್ಬಂದಿಗೆ ಮಾತ್ರ ಮಾಹಿತಿ ಇರುತ್ತದೆ. ಹೀಗಾಗಿ ತನ್ನ ಪತ್ನಿಯ ತೆರಿಗೆ ವಿವರಗಳನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದ್ದರ ಬಗ್ಗೆ ತನಿಖೆ ಮಾಡಬೇಕು ಎಂದು ರಿಷಿ ಸುನಕ್ ಆಗ್ರಹಿಸಿದ್ದಾರೆ.
ವಿವಾದವೇನು?:ಹಣಕಾಸು ಸಚಿವ ರಿಷಿ ಸುನಕ್ ಅವರ ಪತ್ನಿ ಅಕ್ಷತಾ ಮೂರ್ತಿ ಅವರು ಭಾರತದಲ್ಲಿ ಗಳಿಸಿದ ಹಣಕ್ಕೆ ಬ್ರಿಟನ್ನಲ್ಲಿ ತೆರಿಗೆ ಪಾವತಿಸಿಲ್ಲ. ಅಕ್ಷತಾ ಅವರು ಇನ್ಫೋಸಿಸ್ನಲ್ಲಿ ಶೇ.0.9 ರಷ್ಟು ಷೇರು ಹೊಂದಿದ್ದಾರೆ. ಅಲ್ಲದೇ, ನೂರಾರು ಕೋಟಿ ರೂ. ಡಿವಿಡೆಂಡ್ಗಳನ್ನು ಗಳಿಸುತ್ತಾರೆ. ಈ ಹಣಕ್ಕೆ ಅವರು ಬ್ರಿಟನ್ ಸರ್ಕಾರಕ್ಕೆ ತೆರಿಗೆ ಪಾವತಿಸುತ್ತಿಲ್ಲ ಎಂದು ವಿವಾದ ಉಂಟಾಗಿದೆ.
ಅಲ್ಲದೇ, ರಿಷಿ ಸುನಕ್ ಬ್ರಿಟನ್ನ ಮುಂದಿನ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿತವಾಗಿದ್ದಾರೆ. ಪತ್ನಿ ಅಕ್ಷತಾ ಅವರೇ ಸರ್ಕಾರಕ್ಕೆ ತೆರಿಗೆ ವಂಚನೆ ಮಾಡಿದ್ದಾರೆ ಎಂಬ ಆರೋಪ ರಿಷಿ ಸುನಕ್ರ ರಾಜಕೀಯ ಹಾದಿಗೆ ತೊಡಕಾಗಿದೆ.
ತೆರಿಗೆ ಪಾವತಿಗೆ ರೆಡಿ ಎಂದ ಅಕ್ಷತಾ:ತೆರಿಗೆ ವಿವಾದ ಉಂಟಾದ ಬಳಿಕ ಅಕ್ಷತಾ ಮೂರ್ತಿ ಭಾರತದಲ್ಲಿ ಗಳಿಸಿದ ಹಣಕ್ಕೂ ಬ್ರಿಟನ್ನಲ್ಲಿ ತೆರಿಗೆ ಕಟ್ಟಲಾಗುವುದು ಎಂದು ಘೋಷಿಸಿದ್ದಾರೆ. ಕಾನೂನಾತ್ಮಕವಾಗಿ ನಾನ್ ಡೊಮಿನಲ್ ಆದಾಯಕ್ಕೆ ತೆರಿಗೆ ಕಟ್ಟುವ ಅಗತ್ಯವಿಲ್ಲದಿದ್ದರೂ ವಿವಾದ ಇತ್ಯರ್ಥಗೊಳಿಸಲು ತೆರಿಗೆ ಕಟ್ಟಲು ಮುಂದಾಗಿದ್ದಾರೆ.
ಇದನ್ನೂ ಓದಿ:ಸಮೃದ್ಧ ದೇಶಕ್ಕೆ ರೈತರ ಕಲ್ಯಾಣವೇ ಪ್ರಧಾನ: ಕೇಂದ್ರ ಕೃಷಿ ಯೋಜನೆಗಳ ಹೊಗಳಿದ ಮೋದಿ