ಶ್ರೀನಗರ :ಗಡಿ ಜಿಲ್ಲೆ ಕುಪ್ವಾರದ ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಬಳಿ ರಾತ್ರಿ ವೇಳೆ ಪೊಲೀಸರು ಮತ್ತು ಭದ್ರತಾ ಪಡೆಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಭಾರತದೊಳಗೆ ನುಸುಳಲು ಯತ್ನಿಸುತ್ತಿದ್ದ ನುಸುಳುಕೋರನೊಬ್ಬನನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಈ ಬಗ್ಗೆ ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮಾಡಿದ್ದು, ಕಳೆದ ರಾತ್ರಿ ಕುಪ್ವಾರಾ ಪೊಲೀಸರು ಪಡೆದ ನಿರ್ದಿಷ್ಟ ಮಾಹಿತಿ ಆಧರಿಸಿ, ಸೇನೆ ಮತ್ತು ಪೊಲೀಸರ ಜಂಟಿ ತಂಡವು ಸೈದ್‌ಪೋರಾ ಫಾರ್ವರ್ಡ್ ಪ್ರದೇಶದಲ್ಲಿ ಒಳನುಸುಳುತ್ತಿದ್ದ ಗುಂಪನ್ನು ತಡೆದಿದೆ ಎಂದು ಹೇಳಿದೆ. ಜಂಟಿ ತಂಡವು ಒಬ್ಬ ನುಸುಳುಕೋರನನ್ನು ತಟಸ್ಥಗೊಳಿಸಿದೆ. ಹುಡುಕಾಟ ಇನ್ನೂ ನಡೆಯುತ್ತಿದೆ. ಹೆಚ್ಚಿನ ವಿವರಗಳನ್ನು ನಂತರ ನೀಡಲಾಗುವುದು ಎಂದು ಅದು ಹೇಳಿದೆ.
ಜಮ್ಮು ಕಾಶ್ಮೀರದಲ್ಲಿ 37 ಸಕ್ರಿಯ ಭಯೋತ್ಪಾದಕರು: 2019 ರ ಪುಲ್ವಾಮಾ ಭಯೋತ್ಪಾದಕ ದಾಳಿಯ ವಾರ್ಷಿಕೋತ್ಸವದಂದು ಶ್ರೀನಗರದಲ್ಲಿ ಮಂಗಳವಾರ ಮಾತನಾಡಿದ ಕಾಶ್ಮೀರ ವಲಯದ ಎಡಿಜಿಪಿ ವಿಜಯ್ ಕುಮಾರ್, ಪಾಕಿಸ್ತಾನದಲ್ಲಿ ಅಡಗಿರುವ 4 ಭಯೋತ್ಪಾದಕರನ್ನು ಹೊರತುಪಡಿಸಿ ಪುಲ್ವಾಮಾ ದಾಳಿಯಲ್ಲಿ ಭಾಗಿಯಾಗಿದ್ದ ಎಲ್ಲ ಭಯೋತ್ಪಾದಕರನ್ನು ನ್ಯಾಯಾಂಗದ ಕಟಕಟೆಗೆ ತರಲಾಗಿದೆ ಎಂದು ಖಚಿತಪಡಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ 37 ಸಕ್ರಿಯ ಭಯೋತ್ಪಾದಕರಿದ್ದಾರೆ ಮತ್ತು ಶ್ರೀನಗರದಲ್ಲಿ ಯಾವುದೇ ಹೊಸ ಭಯೋತ್ಪಾದಕರು ನೇಮಕಗೊಂಡಿಲ್ಲ ಎಂದು ಅವರು ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಕಾಶ್ಮೀರ ವಲಯದ ಎಡಿಜಿಪಿ ವಿಜಯ್ ಕುಮಾರ್, 2019 ರ ಪುಲ್ವಾಮಾ ದಾಳಿಯಲ್ಲಿ ಒಟ್ಟು 19 ಭಯೋತ್ಪಾದಕರು ಭಾಗಿಯಾಗಿದ್ದರು. ಅದರಲ್ಲಿ 8 ಭಯೋತ್ಪಾದಕರು ಹತರಾಗಿದ್ದಾರೆ. 7 ಮಂದಿ ಜೈಲುಪಾಲಾಗಿದ್ದಾರೆ ಮತ್ತು 4 ಭಯೋತ್ಪಾದಕರು ಪಾಕಿಸ್ತಾನದಲ್ಲಿದ್ದಾರೆ ಎಂದರು. 7 ರಿಂದ 8 ಸ್ಥಳೀಯ ಜೈಶ್ ಎ ಮೊಹಮ್ಮದ್ ಭಯೋತ್ಪಾದಕರು ಪರಾರಿಯಾಗಿದ್ದಾರೆ ಮತ್ತು ಪುಲ್ವಾಮಾದಲ್ಲಿ ಸಕ್ರಿಯವಾಗಿರುವ ಮೂಸಾ ಸುಲೇಮಾನಿ ಸೇರಿದಂತೆ 5 ರಿಂದ 6 ಪಾಕಿಸ್ತಾನಿ ಭಯೋತ್ಪಾದಕರನ್ನು ಶೀಘ್ರದಲ್ಲೇ ತಟಸ್ಥಗೊಳಿಸಲಾಗುವುದು. ಜೈಶ್ ಈಗ ಕಳೆದ 6 ತಿಂಗಳಿಂದ ನೇಮಕಾತಿ ಹೆಚ್ಚಿಸಿದೆ. ಆದರೆ, ಅವರನ್ನು ಈಗ ಜಮ್ಮು ಮತ್ತು ಕಾಶ್ಮೀರದಲ್ಲಿ ಬೆಳೆಯಲು ಬಿಡುವುದಿಲ್ಲ ಎಂದು ಅವರು ತಿಳಿಸಿದರು.