ಕರ್ನಾಟಕ

karnataka

ETV Bharat / bharat

ರೈಲಿನಿಂದ ಇಳಿಯುವಾಗ ಅಚಾನಕ್ ಮೋರಿಗೆ ಬಿದ್ದ 4 ತಿಂಗಳ ಹಸುಗೂಸು; ಕರುಳುಹಿಂಡುವ ತಾಯಿಯ ಆಕ್ರಂದನ - ಮಹಾರಾಷ್ಟ್ರದಲ್ಲಿ ಭಾರೀ ಮಳೆ

ಮಹಾರಾಷ್ಟ್ರದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಸಾಕಷ್ಟು ಅನಾಹುತಗಳು ಘಟಿಸಿವೆ. ರೈಲಿನಿಂದ ಇಳಿಯುವಾಗ ತಾಯಿಯ ಕೈಯಿಂದ ಮಗು ಮೋರಿಗೆ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿದೆ. ಇನ್ನೊಂದೆಡೆ, ಶಾಲೆ ಮುಗಿಸಿಕೊಂಡು ಬರುತ್ತಿದ್ದ ಬಾಲಕಿ ನೀರು ಪಾಲಾಗಿದ್ದಾಳೆ.

ಮೋರಿಗೆ ಬಿದ್ದ 4 ತಿಂಗಳ ಹಸುಗೂಸು
ಮೋರಿಗೆ ಬಿದ್ದ 4 ತಿಂಗಳ ಹಸುಗೂಸು

By

Published : Jul 20, 2023, 7:30 AM IST

ಥಾಣೆ (ಮಹಾರಾಷ್ಟ್ರ):ರೈಲಿನಿಂದ ಇಳಿಯುವಾಗ ಅಚಾನಕ್ಕಾಗಿ ತಾಯಿಯ ಕೈಯಿಂದ ಜಾರಿ ನಾಲ್ಕು ತಿಂಗಳ ಹಸುಗೂಸು ರೈಲ್ವೇ ಹಳಿಗಳ ಪಕ್ಕದಲ್ಲಿದ್ದ ಮೋರಿಗೆ ಬಿದ್ದು, ಕೊಚ್ಚಿ ಹೋದ ಕರುಳು ಹಿಂಡುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ಬುಧವಾರ ನಡೆಯಿತು. ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಠಾಕುರ್ಲಿ ಮತ್ತು ಕಲ್ಯಾಣ್ ರೈಲು ನಿಲ್ದಾಣಗಳ ನಡುವೆ ಅವಘಡ ನಡೆದಿದೆ. ರಾಜ್ಯದಲ್ಲಿ ಬಾರಿ ಮಳೆ ಸುರಿಯುತ್ತಿದ್ದು, ಹಲವು ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಅದರಂತೆ ನಿನ್ನೆ (ಬುಧವಾರ) ಮುಂಬೈನಿಂದ ಹೊರಟಿದ್ದ ರೈಲು ವಿಪರೀತ ಮಳೆಯಿಂದಾಗಿ ಠಾಕುರ್ಲಿ ಮತ್ತು ಕಲ್ಯಾಣ್ ರೈಲು ನಿಲ್ದಾಣಗಳ ಮಧ್ಯೆ ನಿಂತಿತ್ತು. ಮುಂದೆ ಸಂಚರಿಸಲು ಸಾಧ್ಯವಾಗದ ಕಾರಣ ಜನರು ರೈಲಿನಿಂದ ಇಳಿದು ಹೋಗುತ್ತಿದ್ದರು.

ಈ ವೇಳೆ ಮಹಿಳೆಯ ಕೈಯಿಂದ ಮಗು ಜಾರಿ ಪಕ್ಕದಲ್ಲೇ ಇದ್ದ ಚರಂಡಿ ನಾಲೆಗೆ ಬಿದ್ದಿದೆ. ಮಳೆ ನೀರಿನಿಂದ ರಭಸವಾಗಿ ಹರಿಯುತ್ತಿರುವ ನಾಲೆಯಲ್ಲಿ ಮಗು ತಾಯಿಯ ಕಣ್ಣೆದುರೇ ಕೊಚ್ಚಿ ಹೋಯಿತು. ಮಗುವನ್ನು ಕಳೆದುಕೊಂಡ ತಾಯಿಯ ರೋಧನೆ ಮುಗಿಲುಮುಟ್ಟುವಂತಿತ್ತು. ಸಹಾಯಕ್ಕಾಗಿ ಅವರು ರೈಲಿನ ಮುಂದೆ ಗೋಳಿಡುತ್ತಿದ್ದರು.

ರೈಲು ಸಣ್ಣ ಸೇತುವೆಯ ಮೇಲೆ ನಿಂತಿದ್ದು, ಒಬ್ಬರಿಗೆ ನಡೆದು ಹೋಗುವಷ್ಟು ಜಾಗವಿರುವುದನ್ನು ದೃಶ್ಯದಲ್ಲಿ ನೋಡಬಹುದು. ಇಂಥ ಕಡಿದಾದ ಸ್ಥಳದಲ್ಲಿ ಮಹಿಳೆ ಹೋಗುತ್ತಿದ್ದಾಗ ಕಾಲು ಜಾರಿದೆ. ಮಗು ನಾಲೆಗೆ ಬಿದ್ದಿದೆ. ಹಸುಗೂಸು ನೀರಿನಲ್ಲಿ ಕೊಚ್ಚಿ ಹೋಗಿರುವುದನ್ನು ಸಹ ಪ್ರಯಾಣಿಕರು ಕೂಡ ನೋಡಿದ್ದಾರೆ.

ವಿಷಯ ತಿಳಿದ ಪೊಲೀಸ್​​ ಮತ್ತು ಅಗ್ನಿಶಾಮಕ ಸಿಬ್ಬಂದಿ ಪತ್ತೆ ಹಚ್ಚಲು ಕಾರ್ಯಾಚರಣೆ ನಡೆಸುತ್ತಿದ್ದಾರೆ. "ನಾಲೆಯಲ್ಲಿ ಮಗು ಎಷ್ಟು ದೂರ ಹರಿದು ಹೋಗಿದೆ ಎಂಬುದು ಗೊತ್ತಾಗಿಲ್ಲ. ಸಿಬ್ಬಂದಿ ಶೋಧ ನಡೆಸುತ್ತಿದ್ದಾರೆ" ಎಂದು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ತಿಳಿಸಿದರು.

"ಥಾಣೆ ಜಿಲ್ಲೆಯಲ್ಲಿ ಮಳೆ ಸುರಿಯುತ್ತಿದ್ದು, ಕಲ್ಯಾಣ್ ನಿಲ್ದಾಣದಲ್ಲಿ ರೈಲ್ವೆ ಟ್ರ್ಯಾಕ್ ಬದಲಾಯಿಸುವ ಪಾಯಿಂಟ್ ವಿಫಲವಾಗಿದೆ. ಹೀಗಾಗಿ ಆ ಕಡೆಯಿಂದ ಬರುತ್ತಿದ್ದ ರೈಲುಗಳನ್ನು ಕಲ್ಯಾಣ್ ಮತ್ತು ಠಾಕುರ್ಲಿ ನಡುವೆ ನಿಲ್ಲಿಸಲಾಗಿದೆ. ಪ್ರಯಾಣಿಕರು ಹತ್ತಿರದ ರೈಲು ನಿಲ್ದಾಣಕ್ಕೆ ತಲುಪಲು ಹಳಿಗಳ ಮೇಲೆ ನಡೆದುಕೊಂಡು ಬಂದಿದ್ದಾರೆ. ಈ ವೇಳೆ ಅವಘಡ ಸಂಭವಿಸಿದೆ" ಎಂದು ಹಿರಿಯ ರೈಲ್ವೆ ಅಧಿಕಾರಿಯೊಬ್ಬರು ಹೇಳಿದರು.

ಸಿಎಂ ಸಂತಾಪ:ಘಟನೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ತೀವ್ರ ಸಂತಾಪ ಸೂಚಿಸಿದ್ದಾರೆ. ರೈಲು ಇಳಿದು ಬರುವಾಗ ಜಾರಿ ಬಿದ್ದು ಮಗು ನಾಲೆಯಲ್ಲಿ ಕೊಚ್ಚಿಕೊಂಡು ಹೋಗಿರುವುದು ಅತ್ಯಂತ ದುರದೃಷ್ಟಕರ ಘಟನೆ. ಇಂತಹ ಘಟನೆಗಳು ನಡೆಯಬಾರದು ಎಂದು ಹೇಳಿದ್ದಾರೆ.

ಬಾಲಕಿ ಸಾವು, ಸಹೋದರನ ರಕ್ಷಣೆ:ಇನ್ನೊಂದು ಘಟನೆಯಲ್ಲಿ, ಥಾಣೆ ಜಿಲ್ಲೆಯ ಭಿವಂಡಿ ನಗರದಲ್ಲಿ 14 ವರ್ಷದ ಬಾಲಕಿ ಮಳೆ ನೀರಿನಿಂದ ರಭಸವಾಗಿ ಹರಿಯುತ್ತಿದ್ದ ಚರಂಡಿ ನಾಲೆಯಲ್ಲಿ ಕೊಚ್ಚಿ ಹೋಗಿದ್ದಾಳೆ. ಆಕೆಯ ಸಹೋದರನನ್ನು ಜನರು ರಕ್ಷಿಸಿದರು. ಶಾಲೆ ಮುಗಿಸಿಕೊಂಡು ವಾಪಸ್​ ಮನೆಗೆ ಬರುತ್ತಿದ್ದಾಗ ಮಳೆ ನೀರಿಗೆ ಸಿಲುಕಿ ಇಬ್ಬರೂ ಕೊಚ್ಚಿಕೊಂಡು ಹೋಗುತ್ತಿದ್ದರು. ಇದನ್ನು ಕಂಡ ಜನರು ಬಾಲಕನನ್ನು ರಕ್ಷಿಸಿದ್ದಾರೆ. ಆದರೆ, ಬಾಲಕಿ ನೀರಿಗೆ ಸಿಲುಕಿ ಕೊಚ್ಚಿ ಹೋಗಿದ್ದಾಳೆ. ಮೃತದೇಹವನ್ನು ಪತ್ತೆ ಮಾಡಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದರು.

ಇದನ್ನೂ ಓದು:ಗುಜರಾತ್ ಪ್ರವಾಹದಲ್ಲಿ ಸಿಲುಕಿಕೊಂಡಿದ್ದ ಮಂಗಳೂರಿನ ಯಾತ್ರಿಕರು ಸೇಫ್​..

ABOUT THE AUTHOR

...view details