ತಮಿಳುನಾಡು:32 ವರ್ಷದ ಮಹಿಳೆಯೊಬ್ಬರು ಮೃತಪಟ್ಟ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ನವಜಾತ ಶಿಶುವಿನ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿರುವ ಘಟನೆ ಇಲ್ಲಿನ ಚೆಂಗಲ್‌ಪೇಟ್ ಜಿಲ್ಲೆಯ ಚುನಂಬೆಡು ಗ್ರಾಮದಲ್ಲಿ ನಡೆದಿದೆ.
ಆಸ್ಪತ್ರೆಯಲ್ಲಿರದ ವೈದ್ಯರು..ಪುಷ್ಪಾ ಎಂಬ ಮಹಿಳೆಯನ್ನು ಸೋಮವಾರ ತಮ್ಮ ಎರಡನೇ ಮಗುವಿನ ಹೆರಿಗೆಗಾಗಿ ಚುನಂಬೇಡು ಪಿಹೆಚ್‌ಸಿಗೆ ದಾಖಲಿಸಲಾಗಿತ್ತು. ಸಂಜೆ 6 ಗಂಟೆ ಸುಮಾರಿಗೆ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಆದರೆ ಈ ವೇಳೆ ಅಲ್ಲಿನ ವೈದ್ಯ ಡಾ ಆರ್ ಬಾಲು ಅವರು ಆಸ್ಪತ್ರೆಯಲ್ಲಿ ಇರಲಿಲ್ಲ ಎಂದು ತಿಳಿದುಬಂದಿದೆ.
ಹಿಂದಿನ ಸ್ಕ್ಯಾನ್‌ನಲ್ಲಿ ಮಗು ಬ್ರೀಚ್ ಪ್ರೆಸೆಂಟೇಶನ್‌ನಲ್ಲಿದೆ ಎಂದು ತೋರಿಸಿದ್ದರಿಂದ (ಅಡಿ ಮೊದಲು) ಆ ಸಮಯದಲ್ಲಿ ಕರ್ತವ್ಯದಲ್ಲಿದ್ದ ಮೂವರು ನರ್ಸ್‌ಗಳು ವೈದ್ಯರ ಸೂಚನೆಯ ಮೇರೆಗೆ ಹೆರಿಗೆಗೆ ಪ್ರಯತ್ನಿಸಿದರು.
ವಿಡಿಯೋ ಕರೆಯಲ್ಲಿ ಸೂಚನೆ ನೀಡಿದ ವೈದ್ಯರು..ದಾದಿಯರೊಂದಿಗೆ ವಿಡಿಯೋ ಕರೆಯಲ್ಲಿದ್ದ ವೈದ್ಯರು ಹಂತ-ಹಂತವಾಗಿ ಸೂಚನೆಗಳನ್ನು ನೀಡಿದರು ಎಂದು ವರದಿಯಾಗಿದೆ. ಆದರೆ ಇದು ಸಂಕೀರ್ಣವಾದ ಪ್ರಕರಣವಾದ್ದರಿಂದ ಅವರು ಭಯಭೀತರಾಗಿದ್ದಾರೆ. ಆದರೆ, ಮಹಿಳೆಯ ಸ್ಥಿತಿ ಚಿಂತಾಜನಕವಾಗಿದ್ದ ಕಾರಣ ವೈದ್ಯಕೀಯ ಸಿಬ್ಬಂದಿ ಆಕೆಯನ್ನು ಮಧುರಾಂತಕಂನಲ್ಲಿರುವ ಆಸ್ಪತ್ರೆಗೆ ಕರೆದೊಯ್ಯುವಂತೆ ಕುಟುಂಬದ ಸದಸ್ಯರಿಗೆ ಸೂಚಿಸಿದ್ದಾರೆ.