ಕೊಯಮತ್ತೂರು (ತಮಿಳುನಾಡು): ಇಂದು ಮಕ್ಕಳ್ ಕಚ್ಚಿ ಜ್ಯೋತಿಷ್ಯ ವಿಭಾಗದ ಉಪಾಧ್ಯಕ್ಷ ಪ್ರಸನ್ನ ಸ್ವಾಮಿ ಕುಟುಂಬ ಸಮೇತ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕುಟುಂಬಸ್ಥರಲ್ಲಿ ಒಬ್ಬರು ಈಗಾಗಲೇ ಮೃತಪಟ್ಟಿದ್ದಾರೆ. ಉಳಿದ ಮೂವರ ಸ್ಥಿತಿ ಚಿಂತಾಜನಕವಾಗಿದೆ.
ಏನಿದು ಘಟನೆ? ಕರುಪಿಯಾ ಎನ್ನುವವರು ಚೆನ್ನೈನ ಹಳೆ ವನ್ನಾರಪೇಟೆಯ ಉದ್ಯಮಿ. ಟ್ರಾವೆಲ್ ಕಂಪನಿ ನಡೆಸುತ್ತಿದ್ದಾರೆ ಮತ್ತ ಚೆಂಗಲ್ಪಟ್ಟುವಿನಲ್ಲಿ ಜಮೀನು ಹೊಂದಿದ್ದಾರೆ. ಕರುಪಿಯಾ ಅವರು ಜಮೀನಿನ ಸಮಸ್ಯೆ ಸಲುವಾಗಿ ಕೊಯಮತ್ತೂರಿನ ಇಂದು ಮಕ್ಕಳ್ ಕಚ್ಚಿ ಜ್ಯೋತಿಷ್ಯ ವಿಭಾಗದ ಉಪಾಧ್ಯಕ್ಷ ಪ್ರಸನ್ನ ಸ್ವಾಮಿ ಅವರನ್ನು ಸಂಪರ್ಕಿಸಿದ್ದಾರೆ.
ಜಮೀನಿನ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ ಪ್ರಸನ್ನ ಸ್ವಾಮಿ 2020ರಿಂದ ಕರುಪಿಯಾರಿಂದ ಈವರೆಗೆ 25,59,000 ರೂಪಾಯಿವರೆಗೆ ಹಣ ಪಡೆದಿದ್ದಾರೆ. ಹಾಗೆಯೇ ಮಾಂಗಲ್ಯ ಪೂಜೆ ಮಾಡುವಂತೆ ಸೂಚಿಸಿದ್ದಾರೆ. ಅದಕ್ಕಾಗಿ ಉದ್ಯಮಿ ಕರುಪಿಯಾ ತಮ್ಮ ಪತ್ನಿಯ 15 ಸಾವಿರ ಮೌಲ್ಯದ ಚಿನ್ನದ ಆಭರಣ ಸಹ ನೀಡಿದ್ದರು.
ಆದರೆ, ಈವರೆಗೆ ಜಮೀನಿನ ಸಮಸ್ಯೆ ಬಗೆಹರಿಯಲಿಲ್ಲ ಎಂದು ಉದ್ಯಮಿ ಕರುಪಿಯಾ ಸೆಲ್ವಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆರ್.ಎಸ್. ಪುರಂನ ಪ್ರಸನ್ನ ಸ್ವಾಮಿ, ಅವರ ಪತ್ನಿ ಅಶ್ವಿನಿ, ಹರಿಪ್ರಸಾದ್ ಹಾಗೂ ಪ್ರಕಾಶ್ ವಿರುದ್ಧ ವಂಚನೆ ಪ್ರಕರಣಗಳಡಿ ಪ್ರಕರಣ ದಾಖಲಿಸಿಕೊಂಡು ಗಂಭೀರ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ನ್ಯಾಷನಲ್ ಹೆರಾಲ್ಡ್ ಕಚೇರಿಗೆ ಬೀಗ ಹಾಕಿದ ಇಡಿ
ಈ ಹಿನ್ನೆಲೆ ಪ್ರಸನ್ನ ಸ್ವಾಮಿ ಪತ್ನಿ ಅಶ್ವಿನಿ, ಮಗಳು ಹಾಗೂ ತಾಯಿ ಕೃಷ್ಣಕುಮಾರಿ ಅವರೊಂದಿಗೆ ಮನೆಯಲ್ಲಿ ಕ್ರಿಮಿನಾಶಕ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನಮ್ಮ ಆತ್ಮಹತ್ಯೆಗೆ ಚೆನ್ನೈನ ಉದ್ಯಮಿ ಕರುಪಿಯಾ ಮತ್ತು ಅವರ ಕುಟುಂಬದವರೇ ಕಾರಣ ಎಂದೂ ಅವರು ಹೇಳಿದ್ದಾರೆ.
ಮೂವರ ಸ್ಥಿತಿ ಚಿಂತಾಜನಕ:ಈ ಸಂಬಂಧ ತಮ್ಮ ಸ್ನೇಹಿತರಿಗೆ ವಾಟ್ಸ್ಆ್ಯಪ್ ಮೂಲಕ ವಿಡಿಯೋ ಕಳುಹಿಸಿದ್ದಾರೆ. ಬಹಳ ಹೊತ್ತಾದರೂ ಮನೆ ಬಾಗಿಲು ತೆರೆಯದ ಕಾರಣ ಅಕ್ಕಪಕ್ಕದಲ್ಲಿದ್ದವರು ಮನೆಯ ಬಾಗಿಲು ಒಡೆದಿದ್ದಾರೆ. ನಾಲ್ವರೂ ಪ್ರಜ್ಞಾಹೀನರಾಗಿದ್ದರಿಂದ ಅವರನ್ನು ರಕ್ಷಿಸಿ ಚಿಕಿತ್ಸೆಗಾಗಿ ಕೊಯಮತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು ಅವರ ತಾಯಿ ಕೃಷ್ಣಕುಮಾರಿ ಈಗಾಗಲೇ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಉಳಿದ ಮೂವರು ತೀವ್ರ ನಿಗಾದಲ್ಲಿದ್ದಾರೆ.