ಹೈದರಾಬಾದ್:ಕೆಲವು ದಿನಗಳಿಂದ ಕಾಶ್ಮೀರದಲ್ಲಿ ಉಗ್ರರು ಡ್ರೋನ್ ಬಳಸಿ ದಾಳಿಗೆ ಯತ್ನಿಸುತ್ತಿರುವ ಬೆನ್ನಲ್ಲೇ ಗ್ರೆನೆ ರೊಬೋಟಿಕ್ಸ್ ಸಂಸ್ಥೆ ಡ್ರೋನ್ವೊಂದನ್ನು ಅಭಿವೃದ್ಧಿಪಡಿಸಿದೆ. ಗಡಿಯಲ್ಲಿ ಆಗುವ ದಾಳಿಯ ಸವಾಲುಗಳನ್ನು ಸಮರ್ಥವಾಗಿ ಎದುರಿಸಬಲ್ಲ ದೇಶೀಯ ವ್ಯವಸ್ಥೆಯೊಂದನ್ನು ಅಭಿವೃದ್ಧಿಪಡಿಸಿರುವುದಾಗಿ ಹೈದರಾಬಾದ್ ಮೂಲದ ಗ್ರೆನೆ ರೊಬೋಟಿಕ್ಸ್ ಸಂಸ್ಥೆ ಹೇಳಿಕೊಂಡಿದೆ.
‘ಇಂದ್ರಜಾಲ’ ಎಂದು ಹೆಸರಿಸಲಾಗಿರುವ ಈ ವ್ಯವಸ್ಥೆ ದೇಶದ ಗಡಿಯತ್ತ ನುಗ್ಗಿಬರುವ ಯಾವುದೇ ಶಸ್ತ್ರಾಸ್ತ್ರ, ಯುದ್ಧ ಸಾಮಗ್ರಿ, ಡ್ರೋನ್‌ಗಳನ್ನು ಪತ್ತೆ ಮಾಡಿ, ಅವುಗಳನ್ನು ಧ್ವಂಸ ಮಾಡುವ ಶಕ್ತಿ ಹೊಂದಿದೆ ಎಂದು ಸಂಸ್ಥೆ ಬಣ್ಣಿಸಿದೆ.
ಗ್ರೆನೆ ರೊಬೋಟಿಕ್ಸ್ ಸಂಸ್ಥೆಯ ರಕ್ಷಣಾ ಸಿಇಒ ಎಂವಿಎನ್ ಸಾಯಿ ಈಟಿವಿ ಭಾರತದೊಂದಿಗೆ ಮಾತನಾಡಿ, ಕಡಿಮೆ ಆರ್‌ಸಿಎಸ್ (radar cross section) ಬೆದರಿಕೆ ಯುದ್ಧ ಸೇರಿದಂತೆ ಡ್ರೋನ್ ಯುದ್ಧ ವ್ಯವಸ್ಥೆಯಲ್ಲಿ ಇಂದ್ರಜಾಲ್ ಒಂದು ಮಾದರಿ ಬದಲಾವಣೆಯಾಗಿದೆ. ಕಡಿಮೆ ಆರ್‌ಸಿಎಸ್ ಸೇರಿದಂತೆ ಮದ್ದುಗುಂಡುಗಳು, ರಾಕೆಟ್‌ಗಳು ಮತ್ತು ಶತ್ರು ಪ್ರದೇಶದಿಂದ ಹಾರಿಸಲ್ಪಟ್ಟ ಡ್ರೋನ್‌ಗಳನ್ನು ಹೊಡೆದುರುಳಿಸುವ ಸಾಮರ್ಥ್ಯ ಈ ಇಂದ್ರಜಾಲಕ್ಕೆ ಇದೆ ಎಂದು ಹೇಳಿದ್ದಾರೆ.
ಜಮ್ಮುವಿನಲ್ಲಿರುವ ಭಾರತೀಯ ವಾಯುಪಡೆಯ ನೆಲೆಯ ಮೇಲೆ ಇತ್ತೀಚೆಗೆ ಶಂಕಿತ ಡ್ರೋನ್‌ಗಳು ನಡೆಸಿದ ದಾಳಿ ಹಿನ್ನೆಲೆಯಲ್ಲಿ ಇಂದ್ರಜಾಲ ಅಭಿವೃದ್ಧಿಗೆ ಪ್ರಾಮುಖ್ಯತೆ ಸಿಕ್ಕಿದೆ. ಇತ್ತೀಚಿನ ವರ್ಷಗಳಲ್ಲಿ ಚೀನಾ ಸೇರಿದಂತೆ ಹಲವು ದೇಶಗಳು ಡ್ರೋನ್‌ಗಳನ್ನು ಯುದ್ಧದ ಅಸ್ತ್ರವಾಗಿ ಬಳಸಿಕೊಳ್ಳುತ್ತಿವೆ. ಇವುಗಳಿಂದ ಭಾರತದ ಗಡಿ ರಕ್ಷಿಸಲು, ಹಾಲಿ ಬಳಕೆಯಾಗುತ್ತಿರುವ ಪಾಯಿಂಟ್ ಡಿಫೆನ್ಸ್ ಆ್ಯಂಟಿ ಡ್ರೋನ್ ವ್ಯವಸ್ಥೆ ಅಷ್ಟು ಕಾರ್ಯಸಾಧುವಲ್ಲ ಎಂದು ಎಂವಿಎನ್ ಸಾಯಿ ಅವರು ಹೇಳಿದರು.
ಪಶ್ಚಿಮದ ಗಡಿ ಮತ್ತು ದೇಶದ ಅತ್ಯಂತ ಸೂಕ್ಷ್ಮ ಪ್ರದೇಶಗಳನ್ನು ಸಂಪೂರ್ಣವಾಗಿ ರಕ್ಷಿಸಬೇಕಾದರೆ ಕನಿಷ್ಠ ಇಂಥ 300 ಪಾಯಿಂಟ್ ಡಿಫೆನ್ಸ್ ಆ್ಯಂಟಿ ಡ್ರೋನ್ ವ್ಯವಸ್ಥೆ ಅಳವಡಿಸಬೇಕು. ಅದು ಆರ್ಥಿಕವಾಗಿ ಭಾರಿ ಹೊರೆದಾಯಕ. ಆದರೆ, ಪಶ್ಚಿಮದ ಗಡಿಯ ಅಷ್ಟೂ ಪ್ರದೇಶಗಳನ್ನು ಇಂದ್ರಜಾಲ ವ್ಯವಸ್ಥೆಯ ಕೇವಲ 6-7 ಘಟಕಗಳು ರಕ್ಷಿಸಬಲ್ಲವು ಎಂದು ಕಂಪನಿ ಹೇಳಿ ಕೊಂಡಿದೆ.