ಇಂದೋರ್ (ಮಧ್ಯಪ್ರದೇಶ): ಇಂದೋರ್ ದೇವಾಲಯದ ಮೆಟ್ಟಿಲುಬಾವಿ ಕುಸಿದ ಘಟನೆಯಲ್ಲಿ ಮೃತರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ ಎಂದು ಇಂದೋರ್ ಜಿಲ್ಲಾಧಿಕಾರಿ ಡಾ.ಇಳಯರಾಜ ಟಿ. ಇಂದು(ಶುಕ್ರವಾರ) ತಿಳಿಸಿದ್ದಾರೆ. "ಒಟ್ಟು 35 ಮಂದಿ ಸಾವನ್ನಪ್ಪಿದ್ದು, ಒಬ್ಬರು ನಾಪತ್ತೆಯಾಗಿದ್ದಾರೆ. ಮತ್ತು 14 ಜನರನ್ನು ರಕ್ಷಿಸಲಾಗಿದೆ. ಇಬ್ಬರು ಚಿಕಿತ್ಸೆ ಪಡೆದ ನಂತರ ಸುರಕ್ಷಿತವಾಗಿ ಮನೆಗೆ ಮರಳಿದ್ದಾರೆ" ಎಂದು ಅವರು ಮಾಹಿತಿ ನೀಡಿದರು.
ನಾಪತ್ತೆಯಾದವರ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ. 18 ಗಂಟೆಗಳ ಸುದೀರ್ಘ ರಕ್ಷಣಾ ಕಾರ್ಯಾಚರಣೆಯು ಗುರುವಾರ ಸುಮಾರು 12:30ಕ್ಕೆ ಪ್ರಾರಂಭವಾಗಿದ್ದು, ಇನ್ನೂ ಮುಂದುವರೆದಿದೆ. ಮಧ್ಯಪ್ರದೇಶ ಪೊಲೀಸರು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ರಾಜ್ಯ ವಿಪತ್ತು ತುರ್ತು ಮತ್ತು ಪ್ರತಿಕ್ರಿಯೆ ಪಡೆ (ಎಸ್‌ಡಿಇಆರ್‌ಎಫ್) ಮತ್ತು ಜಿಲ್ಲಾಡಳಿತದ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಪ್ರಕರಣದ ವಿವರ:ಅಧಿಕಾರಿಗಳ ಪ್ರಕಾರ, ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಜತೆಗೆ 75 ಸೇನಾ ಸಿಬ್ಬಂದಿಯ ತಂಡ ರಕ್ಷಣೆಯಲ್ಲಿ ತೊಡಗಿದೆ. ರಾಮನವಮಿಯಂದು ಪಟೇಲ್ ನಗರ ಪ್ರದೇಶದ ಬೇಲೇಶ್ವರ ಮಹಾದೇವ ಝೂಲೇಲಾಲ್ ದೇವಸ್ಥಾನದಲ್ಲಿ ಆಯೋಜಿಸಿದ್ದ ಹವನದ ವೇಳೆ ಅವಘಡ ಸಂಭವಿಸಿದೆ.
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ ತಲಾ 50,000 ರೂ. ಪರಿಹಾರ ಘೋಷಿಸಿದ್ದಾರೆ. ಪ್ರಧಾನಮಂತ್ರಿ ಪರಿಹಾರ ನಿಧಿಯ ಮೂಲಕ ₹2 ಲಕ್ಷ ಹೆಚ್ಚುವರಿಯಾಗಿ ನೀಡಲಾಗುವುದು ಎಂದು ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರೊಂದಿಗೆ ಪರಿಸ್ಥಿತಿ ಅವಲೋಕನ ನಡೆಸಿದ್ದಾರೆ.