ಕರ್ನಾಟಕ

karnataka

ETV Bharat / bharat

ದೇವಸ್ಥಾನದಲ್ಲಿ ಬಾವಿಗೆ ಭಕ್ತರು ಬಿದ್ದ ಪ್ರಕರಣ: ಮೃತರ ಸಂಖ್ಯೆ 13ಕ್ಕೆ ಏರಿಕೆ, ನಾಲ್ವರ ನೇತ್ರದಾನಕ್ಕೆ ನಿರ್ಧಾರ - ಇಂದೋರ್​ನಲ್ಲಿ ಬಾವಿಯ ಮೇಲ್ಛಾವಣಿ ಕುಸಿತ

ಮಧ್ಯಪ್ರದೇಶದ ಇಂದೋರ್​ನಲ್ಲಿ ರಾಮ ನವಮಿಯ ದಿನದಂದು ಘೋರ ದುರಂತ ನಡೆದಿದೆ. ದೇವಸ್ಥಾನದಲ್ಲಿ ಬಾವಿಯ ಮೇಲ್ಛಾವಣಿ ಕುಸಿತ ಪ್ರಕರಣದಲ್ಲಿ ಸಾವಿನ ಸಂಖ್ಯೆ 5ರಿಂದ 13ಕ್ಕೆ ಹೆಚ್ಚಳವಾಗಿದೆ. ತಲಾ ಏಳು ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ.

indore-temple-stepwell-collapse-death-toll-rises-to-13-eyes-donate-of-four-deceased
ದೇವಸ್ಥಾನದಲ್ಲಿ ಬಾವಿಗೆ ಭಕ್ತರು ಬಿದ್ದ ಪ್ರಕರಣ: ಮೃತರ ಸಂಖ್ಯೆ 13ಕ್ಕೆ ಏರಿಕೆ, ನಾಲ್ವರ ನೇತ್ರದಾನಕ್ಕೆ ನಿರ್ಧಾರ

By

Published : Mar 30, 2023, 8:53 PM IST

ಇಂದೋರ್ (ಮಧ್ಯಪ್ರದೇಶ): ಮಧ್ಯಪ್ರದೇಶದ ಇಂದೋರ್​ನಲ್ಲಿ ರಾಮ ನವಮಿಯ ದಿನದಂದು ನಡೆದ ಮೆಟ್ಟಿಲುಗಳ ಬಾವಿಯ ಮೇಲ್ಛಾವಣಿ ಕುಸಿತ ಪ್ರಕರಣದಲ್ಲಿ ಮೃತರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಇದುವರೆಗೆ ಹತ್ತು ಜನ ಮಹಿಳೆಯರು ಮತ್ತು ಓರ್ವ ಯುವಕ ಸೇರಿ 11 ಮಂದಿಯ ಮೃತದೇಹಗಳನ್ನು ಹೊರ ತೆಗೆಯಲಾಗಿದೆ. ಸ್ಥಳದಲ್ಲಿ ಇನ್ನೂ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ನಡೆದಿದ್ದೇನು?: ಇಲ್ಲಿನ ಪಟೇಲ್ ನಗರ ಪ್ರದೇಶದ ಬೆಳೇಶ್ವರ ಮಹಾದೇವ್ ಜುಲೇಲಾಲ್ ದೇವಸ್ಥಾನದಲ್ಲಿ ಗುರುವಾರ ರಾಮ ನವಮಿ ಆಚರಿಸಲಾಗಿತ್ತು. ಈ ದೇವಸ್ಥಾನವು ಸುಮಾರು 60 ವರ್ಷಗಳ ಇತಿಹಾಸ ಹೊಂದಿದ್ದು, ಆವರಣದಲ್ಲಿ ಮೆಟ್ಟಿಲುಗಳ ಬಾವಿ ಇದೆ. ರಾಮ ನವಮಿ ನಿಮಿತ್ತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಗುರುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಹವನ ಮತ್ತು ಪ್ರಾರ್ಥನೆಯಲ್ಲಿ ಭಕ್ತರು ಪ್ರಾರ್ಥನೆ ಸಲ್ಲಿಸುತ್ತಿದ್ದರು.

ಇದನ್ನೂ ಓದಿ:ರಾಮ ನವಮಿ: ಗ್ರಾಮೋತ್ಸವದ ವೇಳೆ ಪಟಾಕಿಯ ಕಿಡಿ ಬಿದ್ದು ಪೆಂಡಾಲ್ ಸುಟ್ಟು ಭಸ್ಮ

ಆದರೆ, ದೇಗುಲದ ಪ್ರಾಂಗಣದಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರು. ಇದರಿಂದ ಅಲ್ಲಿಯೇ ಇದ್ದ ಬಾವಿಯ ಮೇಲ್ಛಾವಣಿ ಮೇಲೂ ಜನರು ನಿಂತಿದ್ದಾರೆ. ಬಾವಿಯ ಛಾವಣಿಯಲ್ಲಿ ಕಬ್ಬಿಣದ ಶೆಡ್ ಮತ್ತು ಕಬ್ಬಿಣದ ರೇಲಿಂಗ್​​ ಮಾಡಲಾಗಿತ್ತು. ಆದರೆ, ತುಂಬಾ ಹಳೆಯದು ಮತ್ತು ಅಧಿಕ ಜನಸಂದಣಿಯ ಒತ್ತಡವನ್ನು ತಡೆದುಕೊಳ್ಳಲಾಗದ ಮೇಲ್ಛಾವಣಿಯು ಇದ್ದಕ್ಕಿದ್ದಂತೆ ಬಾರಿ ಶಬ್ದದೊಂದಿಗೆ ಒಳಗೆ ಮುರಿದು ಬಿದ್ದಿದೆ.

40 ಅಡಿ ಆಳದ ಬಾವಿ:ಸುಮಾರು 40 ಅಡಿ ಆಳದ ಬಾವಿ ಇದ್ದು, ಬಾವಿಯಲ್ಲಿ ನೀರು ಕೂಡ ಇತ್ತು. ಛಾವಣಿ ಕುಸಿದು ಬೀಳುತ್ತಿದ್ದಂತೆ ಮಹಿಳೆಯರು ಮತ್ತು ಮಕ್ಕಳು ಸೇರಿ 35ರಿಂದ 40ಕ್ಕೂ ಹೆಚ್ಚು ಬಾವಿಯೊಳಗೆ ಬಿದ್ದಿದ್ದಾರೆ. ಇದಾದ ಬಳಿಕ ನೂಕುನುಗ್ಗಲು ಸಹ ಉಂಟಾಗಿದೆ. ಈ ವಿಷಯ ತಿಳಿದ ಪೊಲೀಸರು ಮತ್ತು ಎಸ್‌ಡಿಆರ್‌ಎಫ್ ತಂಡ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಶುರು ಮಾಡಿದ್ದಾರೆ.

ಮೃತರ ನೇತ್ರದಾನಕ್ಕೆ ಕುಟುಂಬಸ್ಥರ ನಿರ್ಧಾರ: ಇದುವರೆಗೆ 13 ಜನರು ಮೃತಪಟ್ಟಿರುವುದು ಖಚಿತವಾಗಿದೆ. 10 ಜನ ಮಹಿಳೆಯರು ಸೇರಿ 11 ಮೃತ ದೇಹಗಳನ್ನು ಬಾವಿಯಿಂದ ಹೊರತೆಗೆಯಲಾಗಿದೆ. ಇದೇ ವೇಳೆ ಗಾಯಗೊಂಡ ಸ್ಥಿತಿಯಲ್ಲಿ 19 ಜನರನ್ನು ರಕ್ಷಣೆ ಮಾಡಲಾಗಿದೆ. ಗಾಯಾಳುಗಳನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. ಬಹುತೇಕರ ಆರೋಗ್ಯ ಸ್ಥಿತಿ ಸಹಜವಾಗಿದೆ. ಬಾವಿಯಲ್ಲಿ ಇನ್ನೂ ಸಿಲುಕಿಕೊಂಡವರ ರಕ್ಷಣೆಗಾಗಿ ನೀರನ್ನು ಹೊರತೆಗೆದು ಹುಡುಕಲಾಗುತ್ತಿದೆ. ಇದೇ ಘಟನೆಯಲ್ಲಿ ಮೃತಪಟ್ಟ ಇಂದರ್ ಕುಮಾರ್ ಮತ್ತು ಭಾರತಿ ಸೇರಿ ನಾಲ್ವರನ್ನು ಗುರುತಿಸಲಾಗಿದೆ. ಈ ಕುಟುಂಬಸ್ಥರು ದುಃಖದಲ್ಲೂ ಕೂಡ ಮೃತರ ಕಣ್ಣುಗಳನ್ನು ನೇತ್ರದಾನ ಮಾಡಲು ನಿರ್ಧರಿಸಿದ್ದಾರೆ.

ರಾಷ್ಟ್ರಪತಿ, ಪ್ರಧಾನಿ, ಸಿಎಂ ಸಂತಾಪ: ಈ ಘಟನೆಯಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ಮೋದಿ, ಮಧ್ಯಪ್ರದೇಶ ಸಿಎಂ ಶಿವರಾಜ್​ ಸಿಂಗ್​ ಚೌಹಾಣ್, ರಾಜ್ಯ ಕಾಂಗ್ರೆಸ್​ ಅಧ್ಯಕ್ಷ ಕಮಲ್​ ನಾಥ್​ ಸಂತಾಪ ಸೂಚಿಸಿದ್ದಾರೆ. ಇಂದೋರ್‌ನಲ್ಲಿ ಸಂಭವಿಸಿದ ಅಪಘಾತದಲ್ಲಿ ಹಲವರು ಸಾವನ್ನಪ್ಪಿದ ಸುದ್ದಿಯಿಂದ ನನಗೆ ಅತೀವ ದುಃಖವಾಗಿದೆ. ಎಲ್ಲ ದುಃಖಿತ ಕುಟುಂಬಗಳಿಗೆ ನಾನು ನನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ ಎಂದು ರಾಷ್ಟ್ರಪತಿ ಟ್ವೀಟ್​ ಮಾಡಿದ್ದಾರೆ.

ಮೃತರ ಕುಟುಂಬಗಳಿಗೆ ಪರಿಹಾರ ಘೋಷಣೆ: ಈ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಪರಿಹಾರ ಘೋಷಣೆ ಮಾಡಲಾಗಿದೆ. ಮೃತರ ಕುಟುಂಬ ಸದಸ್ಯರಿಗೆ ತಲಾ ಐದು ಲಕ್ಷ ರೂಪಾಯಿ ಮತ್ತು ಗಾಯಾಳುಗಳಿಗೆ ತಲಾ 50 ಸಾವಿರ ರೂ. ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ ತಿಳಿಸಿದ್ದಾರೆ. ಮತ್ತೊಂದೆಡೆ, ಪ್ರಧಾನಿ ಕಾರ್ಯಾಲಯವು ಪರಿಹಾರ ಘೋಷಿಸಿದ್ದು, ಇಂದೋರ್‌ನಲ್ಲಿ ಸಂಭವಿಸಿದ ದುರಂತದಲ್ಲಿ ಮೃತಪಟ್ಟ ಪ್ರತಿಯೊಬ್ಬರ ಸಂಬಂಧಿಕರಿಗೆ ಪಿಎಂಎನ್​​ಆರ್​ಎಫ್​ನಿಂದ ತಲಾ 2 ಲಕ್ಷ ರೂಪಾಯಿ ಹಾಗೂ ಗಾಯಾಳುಗಳಿಗೆ 50 ಸಾವಿರ ರೂಪಾಯಿ ಪರಿಹಾರ ನೀಡುವುದಾಗಿ ಟ್ವೀಟ್​ ಮಾಡಿದೆ.

ಇದನ್ನೂ ಓದಿ:ದೇವಸ್ಥಾನದಲ್ಲಿ ಬಾವಿಯ ಮೇಲ್ಛಾವಣಿ ಕುಸಿತ: ಮಹಿಳೆಯರು ಸೇರಿ ಐವರ ದುರ್ಮರಣ

ABOUT THE AUTHOR

...view details