ಇಂದೋರ್(ಮಧ್ಯಪ್ರದೇಶ): ಇಲ್ಲಿನ ಗುರುಕೃಪಾ ಎಂಬ ರೆಸ್ಟೋರೆಂಟ್ ಅಂಧರಿಗಾಗಿ ಬ್ರೈಲ್ ಮೆನುವನ್ನು ಪರಿಚಯಿಸಿದೆ. ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿಯ ಯಂಗ್ ಇಂಡಿಯನ್ಸ್ ಗ್ರೂಪ್ ಈ ಪರಿಕಲ್ಪನೆಯ ಪರಿಚಯಿಸುವ ಮೂಲಕ ಅಂಧರನ್ನು ಸ್ವಾವಲಂಬಿಗಳನ್ನಾಗಿ ಮತ್ತು ಸ್ವತಂತ್ರರನ್ನಾಗಿ ಮಾಡುವ ಗುರಿಯನ್ನು ಹೊಂದಿದೆ.
ಈ ಬಗ್ಗೆ ಯಂಗ್ ಇಂಡಿಯನ್ಸ್ ಗ್ರೂಪ್ನ ಅಧ್ಯಕ್ಷೆ ಭಾವನಾ ಗನೆಡಿವಾಲ್ ಮಾತನಾಡಿ, ನಾವು ಮಹೇಶ್ ಅಂಧರ ಸಂಸ್ಥೆಯಿಂದ ವಿಜಯನಗರದ ಗುರುಕೃಪಾ ರೆಸ್ಟೋರೆಂಟ್ಗೆ 46 ಅಂಧ ಮಕ್ಕಳನ್ನು ಕರೆತಂದಿದ್ದೇವೆ. ಅವರನ್ನು ಇಲ್ಲಿಗೆ ಕರೆತಂದಿರುವ ಮುಖ್ಯ ಉದ್ದೇಶವೆನೆಂದರೆ ಅವರು ಯಾರ ಸಹಾಯವೂ ಇಲ್ಲದೆ ಆತ್ಮವಿಶ್ವಾಸದಿಂದ ಬ್ರೈಲ್ ಮೆನು ಮೂಲಕ ತಮಗೆ ಇಷ್ಟವಾದ ಆಹಾರವನ್ನು ತಾವೇ ಆರ್ಡರ್ ಮಾಡಬಹುದು. ಇದರಿಂದ ಅವರಲ್ಲಿ ಸ್ವಾಭಿಮಾನ ಮತ್ತು ಆತ್ಮವಿಶ್ವಾಸ ಬೆಳೆಯುತ್ತದೆ. ನಾವು ಇಂದೋರ್‌ನ ಇತರೆ ರೆಸ್ಟೋರೆಂಟ್‌ಗಳಲ್ಲಿಯೂ ಈ ಪರಿಕಲ್ಪನೆಯನ್ನು ಪರಿಚಯಿಸಲು ಪ್ರಯತ್ನಿಸುತ್ತಿದ್ದೇವೆ" ಎಂದು ಹೇಳಿದರು.
ಅಂಧ ವಿದ್ಯಾರ್ಥಿಯೊಬ್ಬರು ಪ್ರತಿಕ್ರಿಯಿಸಿ, ಬ್ರೈಲ್ ಮೆನು ಎಂಬ ಪರಿಕಲ್ಪನೆ ಅಂಧರಿಗೆ ಹೆಚ್ಚು ಸಂತೋಷವನ್ನು ತಂದಿದೆ. ಅವರು ಈಗ ತಮ್ಮ ಆಹಾರವನ್ನು ತಾವೇ ಆರ್ಡರ್ ಮಾಡಬಹುದು. ರೆಸ್ಟೋರೆಂಟ್ನಲ್ಲಿ ಎಲ್ಲರೂ ಪ್ರತ್ಯೇಕ ಆರ್ಡರ್ ನೀಡಿದರು. ಕೆಲವರು ಫಿಂಗರ್ ಚಿಪ್ಸ್ ಆರ್ಡರ್ ಮಾಡಿದರೆ, ಮತ್ತೆ ಕೆಲವರು ನೂಡಲ್ಸ್ ಆರ್ಡರ್ ಮಾಡಿದರು. ನಾವು ಎಂದಿಗೂ ಈ ರೀತಿ ಮೆನು ಕಾರ್ಡ್ ಅಭ್ಯವಾಗುತ್ತದೆ ಮತ್ತು ಅದರಲ್ಲಿ ಏನನ್ನಾದರೂ ಆರ್ಡರ್ ಮಾಡಲು ಸಾಧ್ಯವಾಗುತ್ತದೆ ಎಂದು ಯೋಚಿಸಿರಲಿಲ್ಲ" ಎಂದು ಸಂತಸ ವ್ಯಕ್ತಪಡಿಸಿದರು.