ಇಂದೋರ್(ಮಧ್ಯಪ್ರದೇಶ):ಪೊಲೀಸರು ಎಂದಾಕ್ಷಣ ಎಲ್ಲರೂ ಮಾರುದ್ದ ಓಡಿ ಹೋಗ್ತಾರೆ. ಆದರೆ, ಮಧ್ಯಪ್ರದೇಶದ ವಿಜಯನಗರ ಪೊಲೀಸರು ಮಾಡಿರುವ ಕೆಲಸಕ್ಕೆ ಎಲ್ಲರೂ ಶಹಬ್ಬಾಸ್ಗಿರಿ ನೀಡ್ತಿದ್ದು, ಅವರಿಗೆ ಎಲ್ಲೆಡೆಯಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗ್ತಿದೆ. ಬಡ ಫುಡ್ ಡೆಲಿವರಿ ಹುಡುಗನಿಗೆ ಸಹಾಯ ಮಾಡುವ ಮೂಲಕ ಆತನ ಕಷ್ಟದಲ್ಲಿ ಭಾಗಿಯಾಗಿದೆ ಇಲ್ಲಿನ ಪೊಲೀಸ್ ಇಲಾಖೆ.
ಮಧ್ಯಪ್ರದೇಶದ ಇಂದೋರ್ನ ವಿಜಯನಗರ ಪೊಲೀಸ್ ಇಲಾಖೆ ಸಿಬ್ಬಂದಿ ಬಡ ಡೆಲಿವರಿ ಬಾಯ್ಗೋಸ್ಕರ ಇದೀಗ ಬೈಕ್ವೊಂದನ್ನ ಗಿಫ್ಟ್ ಆಗಿ ನೀಡಿದ್ದಾರೆ. ಪೊಲೀಸ್ ಠಾಣೆಯಲ್ಲಿರುವ ಎಲ್ಲ ಸಿಬ್ಬಂದಿ ದೇಣಿಗೆ ರೂಪದಲ್ಲಿ ಹಣ ಸಂಗ್ರಹ ಮಾಡಿ, ಬೈಕ್ ಗಿಫ್ಟ್ ಆಗಿ ನೀಡಿದೆ.
ಏನಿದು ಪ್ರಕರಣ?: ಇತ್ತೀಚೆಗೆ ರಾತ್ರಿ ವೇಳೆ ಗಸ್ತು ತಿರುಗುತ್ತಿದ್ದ ವೇಳೆ ಜೈ ಹಲ್ದೆ ಎಂಬ ಜೊಮಾಟೊ ಡೆಲಿವರಿ ಹುಡುಗನೊಬ್ಬ ವೇಗವಾಗಿ ಸೈಕ್ಲಿಂಗ್ ಮಾಡ್ತಾ ಆಹಾರದ ಪೊಟ್ಟಣ ಹೊತ್ತೊಯ್ಯುತ್ತಿರುವುದನ್ನ ಪೊಲೀಸ್ ಠಾಣೆಯ ಪ್ರಭಾರಿ ತಹಜೀಬ್ ಖಾಜಿ ನೋಡಿದ್ರು. ಈ ವೇಳೆ, ಆತನನ್ನು ಮಾತನಾಡಿಸಿದಾಗ ಹಣಕಾಸಿನ ತೊಂದರೆ ಬಗ್ಗೆ ಅವರ ಮುಂದೆ ಹೇಳಿಕೊಂಡಿದ್ದಾನೆ.
ಜೊತೆಗೆ ತನ್ನ ಬಳಿ ಮೋಟಾರ್ ಬೈಕ್ ಖರೀದಿ ಮಾಡುವಷ್ಟು ಹಣವಿಲ್ಲ ಎಂದು ತಿಳಿಸಿದ್ದಾನೆ. ಈ ವೇಳೆ ಪೊಲೀಸ್ ಠಾಣೆಯಲ್ಲಿ ಈ ವಿಷಯ ಚರ್ಚೆಗೆ ಬಂದಿದ್ದು, ಆತನಿಗೋಸ್ಕರ ಎಲ್ಲರೂ ಆರ್ಥಿಕವಾಗಿ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಈ ವೇಳೆ, ಡೌನ್ ಪೇಮೆಂಟ್ನಲ್ಲಿ ಬೈಕ್ ಖರೀದಿ ಮಾಡಿಕೊಟ್ಟಿದ್ದಾರೆ. ಉಳಿದ ಕಂತುಗಳನ್ನ ತಾನೇ ಖುದ್ದಾಗಿ ಕಟ್ಟುವುದಾಗಿ ಯುವಕ ಹೇಳಿಕೊಂಡಿದ್ದಾನೆ.
ಇದನ್ನೂ ಓದಿ:ಹೆಂಡ್ತಿ ಕೊಂದ ಆರೋಪದ ಮೇಲೆ ಗಂಡನಿಗೆ ಜೈಲುಶಿಕ್ಷೆ.. ಪ್ರೇಮಿ ಜೊತೆ ಪ್ರತ್ಯಕ್ಷವಾದ ಮಹಿಳೆ!
ಇಂದೋರ್ನ ಮಾಳವೀಯ ನಗರದಲ್ಲಿ ವಾಸವಾಗಿರುವ ಜೈ ಹಲ್ದೆ, ಸೈಕಲ್ ಮೇಲೆ ಫುಡ್ ಡೆಲಿವರಿ ಮಾಡ್ತಿದ್ದು, ಹೀಗಾಗಿ, ದಿನಕ್ಕೆ 200ರಿಂದ 300 ರೂಪಾಯಿ ಮಾತ್ರ ಗಳಿಕೆ ಮಾಡ್ತಿದ್ದಾನೆ. ತಾಯಿ ಕೂಡ ವಿವಿಧ ಮನೆಗಳಲ್ಲಿ ಅಡುಗೆ ಮಾಡುವ ಕೆಲಸ ಮಾಡ್ತಿದ್ದು, ತಂದೆ ಬೇರೆ ನಗರದಲ್ಲಿ ಕೆಲಸ ಮಾಡ್ತಿರುವುದಾಗಿ ಯುವಕ ತಿಳಿಸಿದ್ದಾನೆ.
ಮನೆಯ ಆರ್ಥಿಕ ಸ್ಥಿತಿ ಸರಿ ಇಲ್ಲದ ಕಾರಣ ತಾನೂ ಸೈಕಲ್ ಮೇಲೆ ಫುಡ್ ಡೆಲಿವರಿ ಕೆಲಸ ಮಾಡುವುದಾಗಿ ಹೇಳಿಕೊಂಡಿದ್ದಾನೆ. ಈ ಹಿಂದೆ ದಿನಕ್ಕೆ 3ರಿಂದ ನಾಲ್ಕು ವಿಳಾಸಕ್ಕೆ ಮಾತ್ರ ಫುಡ್ ಡೆಲಿವರಿ ಮಾಡ್ತಿದ್ದ ನಾನು ಇದೀಗ ಬೈಕ್ನಿಂದಾಗಿ 15ರಿಂದ 20 ವಿಳಾಸಕ್ಕೆ ಆಹಾರ ನೀಡ್ತಿರುವುದಾಗಿ ಹೇಳಿಕೊಂಡಿದ್ದು, ಹೆಚ್ಚಿನ ಹಣ ಸಂಪಾದನೆ ಮಾಡ್ತಿದ್ದೇನೆ ಎಂದಿದ್ದಾನೆ. ಜೊತೆಗೆ ಬೈಕ್ ಗಿಫ್ಟ್ ಆಗಿ ನೀಡಿರುವ ಪೊಲೀಸ್ ಇಲಾಖೆಗೆ ಕೃತಜ್ಞನಾಗಿರುವುದಾಗಿ ಹೇಳಿಕೊಂಡಿದ್ದಾನೆ.