ನವದೆಹಲಿ: ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ ಶೇಕಡಾ 33 ರಷ್ಟು ಮೀಸಲಾತಿ ನೀಡುವಂತಾಗಲು ಮಹಿಳಾ ಮೀಸಲಾತಿ ಕಾನೂನನ್ನು ತುರ್ತಾಗಿ ಮತ್ತು ಕಾಲಮಿತಿಯೊಳಗೆ ಜಾರಿಗೆ ತರಬೇಕೆಂದು ಕೋರಿ ವಕೀಲರೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ದೆಹಲಿ ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ.
ಈ ವಿಷಯದಲ್ಲಿ ಅರ್ಜಿದಾರರಿಗೆ ಯಾವುದೇ ವೈಯಕ್ತಿಕ ಹಿತಾಸಕ್ತಿ ಇಲ್ಲ ಎಂದು ಗಮನಿಸಿದ ಹೈಕೋರ್ಟ್ ನ್ಯಾಯಮೂರ್ತಿ ಸುಬ್ರಮಣ್ಯಂ ಪ್ರಸಾದ್, ಈ ಅರ್ಜಿಯ ಬದಲಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸುವಂತೆ ಸೂಚಿಸಿದರು. "ಇದರಲ್ಲಿ ನಿಮ್ಮ ವೈಯಕ್ತಿಕ ಆಸಕ್ತಿ ಏನಿದೆ? ಇಲ್ಲಿ ಕಾಣಿಸುತ್ತಿರುವುದೆಲ್ಲ ಸಾರ್ವಜನಿಕ ಹಿತಾಸಕ್ತಿಯ ವಿಷಯವಾಗಿದೆ" ಎಂದು ನ್ಯಾಯಾಧೀಶರು ಹೇಳಿದರು. ಇದಕ್ಕುತ್ತರಿಸಿದ ಅರ್ಜಿದಾರರ ಪರ ವಕೀಲರು, ತಮ್ಮ ಕಕ್ಷಿದಾರರು ಸಮಸ್ತ ಮಹಿಳಾ ಕುಲವನ್ನು ಪ್ರತಿನಿಧಿಸುತ್ತಾರೆ ಎಂದು ವಾದಿಸಿದರು.
ಅನ್ವಯವಾಗುವ ನಿಯಮಗಳ ಪ್ರಕಾರ ಪಿಐಎಲ್ ಸಲ್ಲಿಸುವ ಸ್ವಾತಂತ್ರ್ಯದೊಂದಿಗೆ ಪ್ರಸ್ತುತ ಸಲ್ಲಿಸಲಾದ ಅರ್ಜಿಯನ್ನು ಹಿಂತೆಗೆದುಕೊಳ್ಳಲು ನ್ಯಾಯಮೂರ್ತಿ ಪ್ರಸಾದ್ ಅರ್ಜಿದಾರರಿಗೆ ಅವಕಾಶ ನೀಡಿದರು. ಈ ಸಂದರ್ಭದಲ್ಲಿ ವಾದಿಸಿದ ಕೇಂದ್ರ ಸರ್ಕಾರ ಪರ ವಕೀಲರು ಕಾನೂನು ಅನುಷ್ಠಾನದ ವಿಷಯ ಈಗಾಗಲೇ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆಯಲ್ಲಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.