ನವದೆಹಲಿ;ಕೊರೊನಾ ಸಾಂಕ್ರಾಮಿಕ ಹಿನ್ನೆಲೆ ವಿಮಾನಯಾನ ಸ್ಥಗಿತಗೊಂಡಿದ್ದ ಕಾರಣ ಬಾಕಿ ಉಳಿದಿರುವ ಪ್ರಯಾಣಿಕರ ಹಣವನ್ನು ಜನವರಿ 2021 ರ ಅಂತ್ಯದ ವೇಳೆಗೆ ಮರುಪಾವತಿ ಮಾಡುವುದಾಗಿ ಇಂಡಿಗೋ ಏರ್ಲೈನ್ಸ್ ಸಂಸ್ಥೆ ತಿಳಿಸಿದೆ.
ವಿಮಾನಯಾನ ಸಂಸ್ಥೆಯ ಮಾಹಿತಿ ಪ್ರಕಾರ, ಮೇ ತಿಂಗಳಲ್ಲಿ ಕಾರ್ಯಾಚರಣೆ ಪುನರಾರಂಭವಾದಾಗಿನಿಂದ, ಇಂಡಿಗೊ ಗ್ರಾಹಕರಿಗೆ ನೀಡಬೇಕಿದ್ದ ಮೊತ್ತವನ್ನು ಶೀಘ್ರವಾಗಿ ಮರುಪಾವತಿಸುತ್ತಿದೆ. ಇಂಡಿಗೋ ಏರ್ಲೈನ್ಸ್ ಈಗಾಗಲೇ ಗ್ರಾಹಕರಿಗೆ ನೀಡಬೇಕಿದ್ದ ಒಟ್ಟು ಮೊತ್ತದ ಶೇ.90 ರಷ್ಟು ಅಂದರೆ 1,000 ಕೋಟಿ ರೂ.ಗಳ ಮರುಪಾವತಿಯನ್ನು ಪ್ರಕ್ರಿಯೆ ಮುಗಿಸಿದೆ.
ಕೋವಿಡ್ -19 ನ ಹಠಾತ್ ಆಕ್ರಮಣ ಮತ್ತು ಅದರ ಪರಿಣಾಮವಾಗಿ ಹೇರಲಾದ ಲಾಕ್ಡೌನ್ ಪರಿಣಾಮ 2020 ರ ಮಾರ್ಚ್ ಅಂತ್ಯದ ವೇಳೆಗೆ ಇಂಡಿಗೋ ತನ್ನ ಕಾರ್ಯಾಚರಣೆಯನ್ನು ಸಂಪೂರ್ಣ ಸ್ಥಗಿತಗೊಳಿಸಿತು. ಹೀಗಾಗಿ ತನ್ನ ಪ್ರಯಾಣಿಕರಿಗೆ ಮರುಪಾವತಿಯನ್ನು ತಕ್ಷಣ ಪ್ರಕ್ರಿಯೆಗೊಳಿಸಲು ನಮಗೆ ಸಾಧ್ಯವಾಗಲಿಲ್ಲ.ಹೀಗಾಗಿ ನಮ್ಮ ಗ್ರಾಹಕರಿಗೆ ನೀಡಬೇಕಾದ ಮರುಪಾವತಿ ತಡವಾಯ್ತು ಎಂದು ಇಂಡಿಗೊದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರೊನೋಜಾಯ್ ದತ್ತಾ ಹೇಳಿದರು.
ಇನ್ನು ವಿಮಾನಗಳು ಪುನಃ ಹಾರಾಟ ಆರಂಭಿಸಿದ್ದರಿಂದ ಮತ್ತು ವಿಮಾನ ಪ್ರಯಾಣಕ್ಕೆ ಬೇಡಿಕೆ ಕೂಡ ಹೆಚ್ಚಿದ್ದರಿಂದ, ಪ್ರಯಾಣಿಕರಿಗೆ ನೀಡಬೇಕಾದ ಹಣವನ್ನು ತ್ವರಿತ ರೀತಿಯಲ್ಲಿ ಮರುಪಾವತಿಸಲಾಗ್ತಿದೆ ಎಂದು ಇಂಡಿಗೋ ವಿಮಾನಯಾನ ಸಂಸ್ಥೆ ತಿಳಿಸಿದೆ.