ಮುಂಬೈ:ವಿಮಾನದಲ್ಲಿ ಪ್ರಯಾಣಿಕರ ಅಶಿಸ್ತಿನ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಇಂಡಿಗೋ ವಿಮಾನದಲ್ಲಿ ಬ್ಯಾಂಕಾಕ್‌ನಿಂದ ಪ್ರಯಾಣಿಸುತ್ತಿದ್ದ ಸ್ವೀಡನ್ ಪ್ರಯಾಣಿಕರೊಬ್ಬರು ಕ್ಯಾಬಿನ್ ಸಿಬ್ಬಂದಿಗೆ ಕಿರುಕುಳ ನೀಡಿದ್ದ ಆರೋಪದ ಮೇಲೆ ಬಂಧಿಸಲಾಗಿತ್ತು. ಬಳಿಕ ಆತನಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
63 ವರ್ಷದ ಸ್ವೀಡನ್ ಪ್ರಜೆ ಎರಿಕ್ ಹೆರಾಲ್ಡ್ ಜೊನಾಸ್ ವೆಸ್ಟ್‌ಬರ್ಗ್ ಎಂಬುವವರು ಗುರುವಾರ ಇಂಡಿಗೋ ವಿಮಾನದಲ್ಲಿ ಮುಂಬೈಗೆ ಬರುತ್ತಿದ್ದರು. ಈ ವೇಳೆ ವೆಸ್ಟ್‌ಬರ್ಗ್ ಕ್ಯಾಬಿನ್ ಮಹಿಳಾ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿ ಕಿರುಕುಳ ನೀಡಿದ್ದರು. ಎರಿಕ್ ಈ ವೇಳೆ ಮದ್ಯಪಾನ ಮಾಡಿದ್ದರು. ಅಮಲಿನಲ್ಲಿದ್ದ ಈತ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ಎಂದು ಆರೋಪಿಸಲಾಗಿದೆ.
ವಿಮಾನ ಮುಂಬೈ ತಲುಪಿದ ಬಳಿಕ ಎರಿಕ್ ವಿರುದ್ಧ ದೂರು ನೀಡಿದ ಸಿಬ್ಬಂದಿ, ಆತನನ್ನು ಸ್ಥಳೀಯ ಪೊಲೀಸರಿಗೆ ಒಪ್ಪಿಸಲಾಯಿತು. ಸಿಬ್ಬಂದಿಯ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಯನ್ನು ಬಂಧಿಸಿದ್ದರು. ಇದಾದ ಬಳಿಕ ಶುಕ್ರವಾರ ಎರಿಕ್ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 20 ಸಾವಿರ ರೂ. ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಅಲ್ಲದೇ, ಪ್ರತಿ ಬಾರಿಯೂ ವಿಚಾರಣೆಗೆ ಹಾಜರಾಗಬೇಕು ಎಂದು ನ್ಯಾಯಾಲಯ ಸೂಚಿಸಿದೆ.
ವಿಮಾನಗಳಲ್ಲಿ ಪ್ರಯಾಣಿಕರ ಅಸಭ್ಯ ವರ್ತನೆ ಕೇಸ್ಗಳು ಹೆಚ್ಚಾಗುತ್ತಿವೆ. ಪ್ರಯಾಣದ ವೇಳೆ ಸಹ ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ವ್ಯಕ್ತಿಯೊಬ್ಬ ಕುಡಿದ ಅಮಲಿನಲ್ಲಿ ಮೂತ್ರ ವಿಸರ್ಜನೆ ಮಾಡಿದ್ದು ಭಾರಿ ವಿವಾದ ಸೃಷ್ಟಿಯಾಗಿತ್ತು. ಇದಾದ ಬಳಿಕ ವಿಮಾನಯಾನ ಸಂಸ್ಥೆಗಳು ಪ್ರಯಾಣದ ವೇಳೆ ಮದ್ಯಪಾನ ಮಾಡುವುದನ್ನು ನಿಷೇಧಿಸಿದ್ದವು. ಅಲ್ಲದೇ, ಇದಕ್ಕಾಗಿ ಹಲವು ನಿಯಮಗಳನ್ನು ರೂಪಿಸಿದ್ದವು.