ನವದೆಹಲಿ: ತನ್ನ ಪ್ರಯಾಣಿಕರೊಬ್ಬರಿಗೆ ನೀಡಲಾಗಿದ್ದ ಸ್ಯಾಂಡ್‌ವಿಚ್‌ನಲ್ಲಿ ಹುಳು ಕಂಡುಬಂದಿರುವ ಕಾರಣಕ್ಕೆ ಇಂಡಿಗೋ ಏರ್‌ಲೈನ್ಸ್ ಶನಿವಾರ ಕ್ಷಮೆ ಯಾಚಿಸಿದೆ. ಕುಶ್ಬೂ ಗುಪ್ತಾ ಎಂಬ ಮಹಿಳೆ ಶುಕ್ರವಾರ ದೆಹಲಿಯಿಂದ ಮುಂಬೈಗೆ ಪ್ರಯಾಣಿಸುತ್ತಿದ್ದರು. ಈ ಸಂದರ್ಭದಲ್ಲಿ ಅವರಿಗೆ ಸಿಬ್ಬಂದಿ ಸ್ಯಾಂಡ್‌ವಿಚ್ ನೀಡಿದ್ದರು. ಇದರಲ್ಲಿ ಹುಳು ಗೋಚರಿಸಿತ್ತು.
ಈ ವಿಚಾರವನ್ನು ಕುಶ್ಬೂ ಗುಪ್ತಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. "ಸ್ಯಾಂಡ್‌ವಿಚ್‌ನಲ್ಲಿ ಹುಳು ಪತ್ತೆಯಾಗಿರುವುದನ್ನು ಕ್ಯಾಬಿನ್ ಸಿಬ್ಬಂದಿಗೆ ತಿಳಿಸಿದರೂ ಅವರು ಇತರ ಪ್ರಯಾಣಿಕರಿಗೆ ಸ್ಯಾಂಡ್‌ವಿಚ್‌ಗಳನ್ನು ನೀಡುವುದನ್ನು ಮುಂದುವರೆಸಿದ್ದರು. ವಿಮಾನದಲ್ಲಿ ಮಕ್ಕಳು, ವೃದ್ಧರು ಮತ್ತು ಇತರ ಪ್ರಯಾಣಿಕರೂ ಇದ್ದರು. ಈ ರೀತಿಯ ಸ್ಯಾಂಡ್ವಿಚ್ನಿಂದ ಸೋಂಕು ತಗುಲಿದರೆ ಯಾರು ಜವಾಬ್ದಾರರು?. ನಿಮ್ಮ ವಿಮಾನಯಾನ ಸಿಬ್ಬಂದಿಗೆ ಯಾವ ರೀತಿಯ ತರಬೇತಿ ನೀಡಲಾಗುತ್ತಿದೆ?, ನನಗೆ ಯಾವುದೇ ಪರಿಹಾರ ಅಥವಾ ಮರುಪಾವತಿಯ ಅಗತ್ಯವಿಲ್ಲ. ಆದರೆ ಪ್ರಯಾಣಿಕರ ಆರೋಗ್ಯ ಮತ್ತು ಸುರಕ್ಷತೆ ನಿಮ್ಮ ಮೊದಲ ಆದ್ಯತೆಯಾಗಿರಬೇಕು" ಎಂದು ಅವರು ಬರೆದಿದ್ದಾರೆ.