ನವದೆಹಲಿ:ಇತ್ತೀಚಿನ ದಿನಗಳಲ್ಲಿ ವಿಮಾನ ಪ್ರಯಾಣ ಹಲವು ವಿವಾದಗಳಿಂದಲೇ ಸುದ್ದಿಯಾಗುತ್ತಿದೆ. ಆದರೆ, ನಿನ್ನೆ ವಿಶ್ವ ತಾಯಂದಿರ ದಿನದಂದು ವಿಶೇಷ ಮತ್ತು ಭಾವುಕ ಕ್ಷಣಕ್ಕೆ ಸಾಕ್ಷಿಯಾಯಿತು. ತಾಯಿ -ಮಗಳಿಬ್ಬರೂ ಇಂಡಿಗೋ ವಿಮಾನದ ಕ್ಯಾಬಿನ್ ಸಿಬ್ಬಂದಿಯಾಗಿ ಕೆಲಸ ಮಾಡಿದ್ದು, ಮಗಳು ತನ್ನ ತಾಯಿಯ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ್ದಾರೆ. ಈ ವಿಡಿಯೋವನ್ನು ವಿಮಾನಯಾನ ಸಂಸ್ಥೆ ಟ್ವೀಟ್ನಲ್ಲಿ ಹಂಚಿಕೊಂಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಗಗನಸಖಿ ವಿಶೇಷ ಉದ್ಘೋಷ:ಇಂಡಿಗೋ ವಿಮಾನದ ಗಗನಸಖಿಯಾದ ನಬಿರಾ ಸಶ್ಮಿ ತಾಯಿಯ ಬಗ್ಗೆ ಹೆಮ್ಮೆಯ ಮಾತನ್ನಾಡಿ ಮೆಚ್ಚುಗೆ ಗಳಿಸಿದವರು. ತಾಯಿ ಮಗಳಿಬ್ಬರೂ ನಿನ್ನೆ ಒಂದೇ ವಿಮಾನದಲ್ಲಿ ಕ್ಯಾಬಿನ್ ಸಿಬ್ಬಂದಿಯಾಗಿದ್ದರು. ವಿಶೇಷವಾಗಿ ನಿನ್ನೆ ವಿಶ್ವ ಅಮ್ಮಂದಿರ ದಿನ. ಇದನ್ನು ಬಳಸಿಕೊಂಡ ನಬಿರಾ, ಪ್ರಯಾಣದ ವೇಳೆ ವಿಶೇಷ ಉದ್ಘೋಷ ಹೊರಡಿಸಿ ಹೆತ್ತಮ್ಮನ ಬಗ್ಗೆ ಮನದಾಳದ ಮಾತು ಹಂಚಿಕೊಂಡಿದ್ದಾರೆ.
ಮೊದಲು ತಮ್ಮನ್ನು ಪರಿಚಯಿಸಿಕೊಂಡ ನಬಿರಾ ಸಶ್ಮಿ, ಬಳಿಕ ತನ್ನ ತಾಯಿಯನ್ನು ಪರಿಚಯಿಸುವುದು ವಿಡಿಯೋದಲ್ಲಿದೆ. ವಿಮಾನದಲ್ಲಿ ಕ್ಯಾಬಿನ್ ಸಿಬ್ಬಂದಿ ಸದಸ್ಯನಾಗಿ ಸಮವಸ್ತ್ರದಲ್ಲಿ ತನ್ನ ತಾಯಿ ಜೊತೆಗೆ ಇದೇ ಮೊದಲ ಬಾರಿಗೆ ಒಟ್ಟಾಗಿದ್ದೇನೆ ಎಂದು ಅವರು ಹೇಳುತ್ತಾರೆ.
"ನನ್ನ ತಾಯಿ ಗಗನಸಖಿಯಾಗಿ, ಕ್ಯಾಬಿನ್ ಸಿಬ್ಬಂದಿಯಾಗಿ ಎಲ್ಲಾ ಕೆಲಸಗಳನ್ನು ಮಾಡುವುದನ್ನು ನೋಡಿದ್ದೇನೆ. ಇಂದು ನಾನು ಆಕೆಯ ಬೂಟುಗಳನ್ನೇ ಧರಿಸಿ ಬಂದಿದ್ದೇನೆ. ಕಳೆದ ಆರು ವರ್ಷಗಳಲ್ಲಿ ನನ್ನಮ್ಮ ಅನೌನ್ಸ್ಮೆಂಟ್ನಲ್ಲಿ ಮಾತನಾಡುವುದನ್ನು ಕಂಡಿದ್ದೇನೆ. ಅಂತಿಮವಾಗಿ, ಇಂದು ನಾನು ಅವರ ಪರವಾಗಿ ಮಾತನಾಡುವ ದಿನ ಬಂದಿದೆ. ನಾವಿಬ್ಬರೂ ಒಂದೇ ವಿಮಾನದ ಸಿಬ್ಬಂದಿಯಾಗಿರುವುದು ಖುಷಿ ತಂದಿದೆ. ಇಂದಿನ ನನ್ನೆಲ್ಲಾ ಯಶಸ್ಸು ನನ್ನ ತಾಯಿಗೆ ಹೆಮ್ಮೆ ತಂದಿದೆ ಎಂದು ನಾನು ಭಾವಿಸುತ್ತೇನೆ" ಎಂದು ನಬಿರಾ ಸಶ್ಮಿ ಹೇಳುತ್ತಾರೆ.