ನವದೆಹಲಿ:ಭಾರತ ಸ್ವತಃ ತಯಾರಿಸಿದ ಕ್ರ್ಯಾಶ್ ಟೆಸ್ಟಿಂಗ್ ಸುರಕ್ಷತಾ ಯೋಜನೆಯಾದ ಭಾರತ್ ಎನ್ಸಿಎಪಿ ಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಂಗಳವಾರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, 30 ಮಾದರಿಗಳ ಕ್ರ್ಯಾಶ್ ಟೆಸ್ಟಿಂಗ್ಗೆ ಅರ್ಜಿಗಳು ಬಂದಿದ್ದು, ಇದು ದೇಶಕ್ಕೆ ಐತಿಹಾಸಿಕ ದಿನವಾಗಿದೆ ಎಂದು ಹೇಳಿದರು.
"ಇಂದು ಭಾರತೀಯ ಆಟೋಮೊಬೈಲ್ ಉದ್ಯಮದ ಇತಿಹಾಸದಲ್ಲಿ ಬಹಳ ಮುಖ್ಯವಾದ ದಿನವಾಗಿದೆ. ಅಲ್ಲದೆ ಇದು ನಮ್ಮ ಸಮಾಜಕ್ಕೂ ಮುಖ್ಯ ದಿನವಾಗಿದೆ. ಭಾರತೀಯ ಆಟೋಮೊಬೈಲ್ ಉದ್ಯಮದ ಸಹಕಾರವನ್ನು ನಾನು ನಿಜವಾಗಿಯೂ ಪ್ರಶಂಸಿಸುತ್ತೇನೆ. ಅವರ ಸಹಕಾರದಿಂದಾಗಿ ಇಂದು ಭಾರತ್ ಎನ್ಸಿಎಪಿ ಯೋಜನೆಯನ್ನು ಪ್ರಾರಂಭಿಸುವ ಸಮಯ ಒದಗಿ ಬಂದಿದೆ" ಎಂದರು.
ಯೋಜನೆಯ ಬಗ್ಗೆ ಮಾತನಾಡಿದ ಸಚಿವರು, "ಇದು ಸರ್ಕಾರದ ಯೋಜನೆಯಾಗಿತ್ತು. ವಿದೇಶದಲ್ಲಿ ಪರೀಕ್ಷಾ ವೆಚ್ಚ 2.5 ಕೋಟಿ ರೂ ಆಗುತ್ತದೆ. ಆದರೆ ಭಾರತದಲ್ಲಿ ಭಾರತ್ ಎನ್ಸಿಎಪಿ ಅಡಿಯಲ್ಲಿ ಇದಕ್ಕೆ ಕೇವಲ 60 ಲಕ್ಷ ರೂ. ಖರ್ಚಾಗುತ್ತದೆ. ಜಾಗತಿಕ ಮಾನದಂಡಗಳೊಂದಿಗೆ ನಿಮ್ಮ ಮಾರುಕಟ್ಟೆ ಹೆಚ್ಚಾಗಲಿದೆ. ಗ್ರಾಹಕರಿಗೂ ಇದರಿಂದ ಸಹಾಯವಾಗುವುದರಿಂದ ನನಗೆ ನಿಜವಾಗಿಯೂ ಸಂತೋಷವಾಗುತ್ತಿದೆ. ಸ್ಟಾರ್ ರೇಟಿಂಗ್ ಮೂಲಕ ಜನರು ಉತ್ಪನ್ನದ ಗುಣಮಟ್ಟವನ್ನು ಅರ್ಥಮಾಡಿಕೊಳ್ಳಬಹುದು" ಎಂದು ಕೇಂದ್ರ ಸಚಿವರು ತಿಳಿಸಿದರು.
"ಜನರು ಸುರಕ್ಷತೆ, ಮಾಲಿನ್ಯದ ಬಗ್ಗೆ ಜಾಗರೂಕರಾಗಿದ್ದಾರೆ. ಅವರು ವಿವಿಧ ರೀತಿಯ ಇಂಧನವನ್ನು ಬಳಸಲು ಬಯಸುತ್ತಾರೆ. ಹೊಸ ಪರ್ಯಾಯ ಲಭ್ಯವಿದ್ದರೆ ಅವರು ಬಳಸಲು ಸಿದ್ಧರಿದ್ದಾರೆ" ಎಂದು ಅವರು ಹೇಳಿದರು. "ಇಂದು ನಾವು ಹಲವಾರು ವಾಹನ ತಯಾರಕರಿಂದ 30 ಮಾದರಿಗಳನ್ನು ಪರೀಕ್ಷಿಸಲು ಮತ್ತು ಪ್ರಮಾಣೀಕರಿಸಲು ವಿನಂತಿಗಳನ್ನು ಸ್ವೀಕರಿಸಿದ್ದೇವೆ" ಎಂದು ತಿಳಿಸಿದರು.