ಮಲಪ್ಪುರಂ(ಕೇರಳ): ಕೇರಳದಲ್ಲಿ ಮತ್ತೊಂದು ಮಂಕಿಪಾಕ್ಸ್ ಪ್ರಕರಣ ದೃಢಪಟ್ಟಿದ್ದು, ಈ ಮೂಲಕ ದೇಶದಲ್ಲೇ ಮೂರನೇ ಪ್ರಕರಣ ದಾಖಲಾಗಿದೆ. ಆಘಾತಕಾರಿ ಅಂಶ ಎಂದರೆ ಈ ಹೊಸ ಸೋಂಕಿನ ಮೂರು ಪ್ರಕರಣಗಳೂ ಕೂಡ ಕೇರಳದಲ್ಲಿ ವರದಿಯಾಗಿವೆ.
ಮಲಪ್ಪುರಂದ ಮೂಲದ 35 ವರ್ಷದ ವ್ಯಕ್ತಿ ಜುಲೈ 6ರಂದು ಯುಎಇಯಿಂದ ವಾಪಸ್ ಆಗಿದ್ದರು. 13ರಂದು ಆ ವ್ಯಕ್ತಿಗೆ ಜ್ವರ ಕಾಣಿಸಿಕೊಂಡಿತ್ತು. 15ರಂದು ದೇಹದಲ್ಲಿ ಚರ್ಮದ ಮಚ್ಚೆಗಳು ಪತ್ತೆಯಾಗಿದ್ದವು. ಹೀಗಾಗಿ ಮಂಕಿಪಾಕ್ಸ್ ಸೋಂಕಿನ ಶಂಕೆ ಮೇರೆಗೆ ವೈದಕೀಯ ಮಾದರಿಗಳನ್ನು ಪುಣೆ ವೈರಾಲಜಿ ಸಂಸ್ಥೆಗೆ ಕಳುಹಿಸಲಾಗಿತ್ತು. ಪ್ರಯೋಗಾಲಯದ ವರದಿಯಲ್ಲಿ ಮಂಕಿಪಾಕ್ಸ್ ದೃಢಪಟ್ಟಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಹೇಳಿದೆ.
ಸದ್ಯ ಈ ರೋಗಿಯು ಮಂಚೇರಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರೋಗಿಯೊಂದಿಗೆ ನಿಕಟ ಸಂಪರ್ಕಕ್ಕೆ ಬಂದವರ ಮೇಲೂ ನಿಗಾ ಇರಿಸಲಾಗಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು, ಯುಎಇಯಿಂದ ಮರಳಿದ ಕೇರಳದ ಇಬ್ಬರಿಗೂ ಮಂಕಿಪಾಕ್ಸ್ ಇರುವುದು ದೃಢಪಟ್ಟಿತ್ತು. ಈಗ ಸೋಂಕಿತರ ಆರೋಗ್ಯ ಸ್ಥಿರವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.