ನವದೆಹಲಿ:ಚಂದ್ರನ ದಕ್ಷಿಣ ಧ್ರುವದ ಮೇಲೆ ಭಾರತದ ಚಂದ್ರಯಾನ-3 ಗಗನ ನೌಕೆಯು ಯಶಸ್ವಿಯಾಗಿ ಲ್ಯಾಂಡ್ ಆಗಿ ಐತಿಹಾಸ ಸೃಷ್ಟಿಸಿತು. ಐತಿಹಾಸಿಕ ಕ್ಷಣವನ್ನು ದಕ್ಷಿಣ ಆಫ್ರಿಕಾದ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿಂದಲೇ ವೀಕ್ಷಿಸಿದರು. ಚಂದ್ರನ ಮೇಲೆ ಲ್ಯಾಂಡರ್ ಇಳಿದ ಮರುಕ್ಷಣವೇ ಪ್ರಧಾನಿ ತಿರಂಗಾ ಧ್ವಜವನ್ನು ಕೈಯಲ್ಲಿ ಹಿಡಿದು ಸಂತಸಪಟ್ಟರು.
ಗಗನ ನೌಕೆಯ ಸಾಫ್ಟ್ ಲ್ಯಾಂಡಿಂಗ್ ಪ್ರಕ್ರಿಯೆ ಯಶಸ್ವಿಗೊಳಿಸಿದ್ದಕ್ಕೆ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದ ಮೋದಿ, ''ಭೂಮಿ ಮೇಲೆ ಸಂಕಲ್ಪ ಮಾಡಿದ್ದನ್ನು ಚಂದ್ರನಲ್ಲಿ ಸಾಕಾರ ಮಾಡಿದ್ದೇವೆ. ಭಾರತ ಈಗ ಚಂದ್ರನ ಮೇಲೆ..'' ಎಂದು ಹರ್ಷ ವ್ಯಕ್ತಪಡಿಸಿದರು. ಅಲ್ಲದೇ, ''ಭಾರತದ ಚಂದ್ರಯಾನದ ಯಶಸ್ಸು ಇಡೀ ಮಾನವತೆಗೆ ಸೇರಿದೆ. ಇಂತಹ ಐತಿಹಾಸಿಕ ಕ್ಷಣಗಳನ್ನು ನೋಡಿದಾಗ ನಮಗೆ ತುಂಬಾ ಹೆಮ್ಮೆಯಾಗುತ್ತದೆ. ಇದು ನವ ಭಾರತದ ಉದಯ'' ಎಂದೂ ಪ್ರಧಾನಿ ಮೋದಿ ಹೇಳಿದ್ದಾರೆ.
ಚಂದ್ರನ ದಕ್ಷಿಣ ಧ್ರುವದಲ್ಲಿ ಮೊದಲ ಬಾರಿಗೆ ಬಾಹ್ಯಾಕಾಶ ನೌಕೆಯನ್ನು ಇಳಿಸುವ ಮೂಲಕ ಭಾರತ ಹೊಸ ಚರಿತ್ರೆ ಸೃಷ್ಟಿಸಿದ್ದನ್ನು ಉಲ್ಲೇಖಿಸಿದ ಮೋದಿ, ''ಇದು ಶಾಶ್ವತವಾಗಿ ಸ್ಮರಿಸಬೇಕಿರುವ ಕ್ಷಣ'' ಎಂದು ಗುಣಗಾನ ಮಾಡಿದರು.
ಇದನ್ನೂ ಓದಿ:ಚಂದ್ರನ 'ದಕ್ಷಿಣ ಪಥೇಶ್ವರ' ಭಾರತ: ಯಾರೂ ಮುಟ್ಟದ ಜಾಗದಲ್ಲಿ 'ಇಸ್ರೋ' ಹೆಜ್ಜೆಗುರುತು!
"ಒಂದು ಭೂಮಿ, ಒಂದು ಕುಟುಂಬ ಹಾಗೂ ಒಂದು ಭವಿಷ್ಯ ಎಂಬ ನಮ್ಮ ಧ್ಯೇಯ ಇಂದು ಜಗತ್ತಿನಾದ್ಯಂತ ಪ್ರತಿಧ್ವನಿಸುತ್ತಿದೆ. ಚಂದ್ರನ ಮಿಷನ್ ಕೂಡ ಮಾನವಕೇಂದ್ರಿತ ವಿಧಾನವನ್ನೇ ಆಧರಿಸಿದೆ. ಆದ್ದರಿಂದ ಈ ಯಶಸ್ಸು ಇಡೀ ಮಾನವತೆಗೆ ಸೇರಿದ್ದು'' ಎಂದು ಪ್ರಧಾನಿ ಪ್ರತಿಪಾದಿಸಿದರು. ''ಚಂದ್ರನ ಮೇಲೆ ಚಂದ್ರಯಾನ-3 ಮಿಷನ್ ಇಳಿದಿರುವುದು ಐತಿಹಾಸಿಕ ಕ್ಷಣ. ಅಭಿವೃದ್ಧಿ ಹೊಂದಿದ ಭಾರತದ ಕಹಳೆಯನ್ನು ಇದು ಮೊಳಗಿಸಿದೆ'' ಎಂದು ಮೋದಿ ತಿಳಿಸಿದರು.
''ನವ ಭಾರತದ ಹೊಸ ಬೆಳವಣಿಗೆಗೆ ನಾವು ಸಾಕ್ಷಿಯಾಗಿದ್ದೇವೆ. ಹೊಸ ಇತಿಹಾಸವನ್ನು ಬರೆದಿದ್ದೇವೆ. ಬ್ರಿಕ್ಸ್ ಶೃಂಗಸಭೆಗಾಗಿ ನಾನು ದಕ್ಷಿಣ ಆಫ್ರಿಕಾದಲ್ಲಿದ್ದರೂ ನನ್ನ ಹೃದಯ ಮತ್ತು ಮನಸ್ಸು ಭಾರತದಲ್ಲೇ ಇದೆ" ಎಂದು ಪ್ರಧಾನಿ ಹೇಳಿದರು.
ಇಸ್ರೋ ಅಧ್ಯಕ್ಷರಿಗೆ ಮೋದಿ ಕರೆ, ಅಭಿನಂದನೆ:ಇದೇ ವೇಳೆ, ಜೋಹಾನ್ಸ್‌ಬರ್ಗ್‌ನಿಂದ ಪಿಎಂ ಮೋದಿ ಅವರು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಅವರಿಗೆ ದೂರವಾಣಿ ಮೂಲಕ ಕರೆ ಮಾತನಾಡಿದರು. ಶೀಘ್ರದಲ್ಲೇ ಬೆಂಗಳೂರಿಗೆ ಭೇಟಿ ನೀಡಿ ಇಡೀ ತಂಡವನ್ನು ವೈಯಕ್ತಿಕವಾಗಿ ಅಭಿನಂದಿಸುವುದಾಗಿ ಹೇಳಿದರು. "ಸೋಮನಾಥ್ ಜೀ., ನಿಮ್ಮ ಹೆಸರು ಸೋಮನಾಥ್ ಕೂಡ ಚಂದ್ರನೊಂದಿಗೆ ಸಂಬಂಧ ಹೊಂದಿದೆ. ನಿಮಗೆ ಮತ್ತು ನಿಮ್ಮ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಎಲ್ಲರಿಗೂ ನನ್ನ ಶುಭಾಶಯಗಳನ್ನು ತಿಳಿಸಿ'' ಎಂದು ದೂರವಾಣಿ ಕರೆಯಲ್ಲಿ ಪ್ರಧಾನಿ ಮೋದಿ ತಿಳಿಸಿದರು.
ಇದನ್ನೂ ಓದಿ:ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಇಳಿಸಿದ ಮೊದಲ ದೇಶ ಭಾರತ! ಇತಿಹಾಸ ಸೃಷ್ಟಿಸಿದ ಇಸ್ರೋ!