ನಾವೆಲ್ಲರೂ, ರಾಷ್ಟ್ರವಾಗಿ, ಸಮಾಜವಾಗಿ ಅಥವಾ ವೈಯಕ್ತವಾಗಿ ಕೋವಿಡ್ ವಿಷಯದಲ್ಲಿ ಎಡವಿದ್ದೇವೆ. ಆರೋಗ್ಯ ಕ್ಷೇತ್ರ ಸಂಕಷ್ಟದ ಸಮಯದಲ್ಲಿರುವಾಗ ಕೆಲವು ಪ್ರಶ್ನೆಗಳಿಗೆ ಉತ್ತರಿಸಲಾಗದ ಪರಿಸ್ಥಿತಿಯಲ್ಲಿ ಇದ್ದುದು ಸತ್ಯ. ವೈದ್ಯರು ವಿಶೇಷವಾಗಿ ವಿಷಯ ಪರಿಣಿತರು ನಮಗೆ ಎಚ್ಚರಿಕೆ ನೀಡುವುದನ್ನು ಯಾವತ್ತೂ ನಿಲ್ಲಿಸಿರಲಿಲ್ಲ. ಆದರೂ ನಾವು ಮೈಮರೆತೆವು. ಕೆಲವರು ಕೋವಿಡ್ ಒಂದನೇ ಅಲೆಯ ಬಳಿಕ ನಾವು ಸಾಂಕ್ರಾಮಿಕದ ವಿರುದ್ಧ ಯುದ್ದ ಗೆದ್ದಿದ್ದೇವೆ ಎಂದು ಬೀಗಿದರು. ಆದರೆ, ವೈದ್ಯಕೀಯ ಕ್ಷೇತ್ರದಲ್ಲಿರುವ ಯಾರೊಬ್ಬರೂ ಈ ರೀತಿ ಸಂಭ್ರಮಾಚರಣೆ ಮಾಡಲು ಸಾಧ್ಯವಿಲ್ಲ. ಕಾರಣ ಅವರಿಗೆ ಸೋಂಕಿನ ತೀವ್ರತೆ ಮತ್ತು ಅದರಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಚೆನ್ನಾಗಿ ಅರಿವಿದೆ, ಆತಂಕವಿದೆ.
1. ಕೋವಿಡ್ ನಡುವೆ ಚುನಾವಣೆ
21 ದಶಲಕ್ಷ ಜನಸಂಖ್ಯೆ ಹೊಂದಿರುವ ಶ್ರೀಲಂಕಾ ಸಾಂಕ್ರಾಮಿಕ ರೋಗದ ಮಧ್ಯೆ ಚುನಾವಣೆ ನಡೆಸಿದ ವಿಶ್ವದ ಮೊದಲ ದೇಶ. ಇದು 1.3 ಬಿಲಿಯನ್ ಜನಸಂಖ್ಯೆ ಹೊಂದಿರುವ ದೇಶಕ್ಕೆ ಸ್ಫೂರ್ತಿಯಾಗಬಾರದಿತ್ತು. ಆದರೂ ಭಾರತದಲ್ಲಿ ಕೋವಿಡ್ ನಡುವೆಯೇ ಬಿಹಾರ ವಿಧಾನಸಭೆ ಚುನಾವಣೆ ನಡೆಯಿತು. ಚುನಾವಣೆಯ ಸಂದರ್ಭದಲ್ಲಿ ಸೋಂಕು ಅಷ್ಟೊಂದು ಗಂಭೀರ ಪರಿಸ್ಥಿತಿಯಲ್ಲಿ ಇರದಿದ್ದರೂ, ಚುನಾವಣಾ ಪ್ರಚಾರ ಸಭೆಗಳು ಆನ್ಲೈನ್ ಮತ್ತು ವರ್ಚುವಲ್ ಮೂಡ್ನಲ್ಲಿ ನಡೆಯಿತು.
2. ವ್ಯಾಕ್ಸಿನ್ ಮತಗಳಿಸುವ ಅಸ್ತ್ರವಾಯಿತು
ಚುನಾವಣಾ ಪ್ರಚಾರದ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಕೋವಿಡ್ ಲಸಿಕೆಯನ್ನೇ ಚುನಾವಣಾ ಅಸ್ತ್ರ ಮಾಡಿಕೊಂಡವು. ನಾವು ಅಧಿಕಾರಕ್ಕೆ ಬಂದರೆ ಉಚಿತವಾಗಿ ಲಸಿಕೆ ನೀಡುತ್ತೇವೆಂದು ರಾಜಕೀಯ ನಾಯಕರು ಘೋಷಣೆಗಳ ಮೇಲೆ ಘೋಷಣೆಗಳನ್ನು ಮಾಡಿದರು. ಇದಾದ ಬಳಿಕ ದೇಶದ ಅರ್ಧದಷ್ಟು ಜನರು ಲಸಿಕೆ ಪಡೆಯದಿದ್ದರೂ, ವಿದೇಶಗಳಿಗೆ ಲಕ್ಷಾಂತರ ಡೋಸ್ ಲಸಿಕೆ ರಫ್ತು ಮಾಡಲಾಯಿತು. ಈ ಕಾರಣದಿಂದ ದೇಶದಲ್ಲಿ ಲಸಿಕೆ ಕೊರತೆ ಉಂಟಾಯಿತು. ಇದೀಗ ಜನರು ಹೆಚ್ಚು ಹಣ ಕೊಟ್ಟು ಲಸಿಕೆ ಪಡೆಯಬೇಕಾದ ಅನಿವಾರ್ಯತೆ ಎದುರಾಗಿದೆ.
3. ರಕ್ಷಣೆಗೆ ಇರುವುದು ನಾಲ್ಕೇ ದಾರಿ
ಸದ್ಯ, ದೇಶದಲ್ಲಿ ಕೋವಿಡ್ ಉಲ್ಬಣಗೊಂಡಿದೆ. ಪ್ರತಿನಿತ್ಯ 3 ಲಕ್ಷಕ್ಕಿಂತಲೂ ಅಧಿಕ ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿವೆ. ಸ್ಮಶಾನ, ಶವಾಗಾರಗಳಲ್ಲಿ ಹೆಣಗಳು ತುಂಬಿ ಹೋಗಿವೆ. ಈಗ ನಮಗೆ ರಕ್ಷಣೆಗೆ ಇರುವುದು ನಾಲ್ಕೇ ದಾರಿ ಅವುಗಳೆಂದರೆ..
1. ಮಾಸ್ಕ್ ಧರಿಸುವುದು
2. ಸಾಮಾಜಿಕ ಅಂತರ ಕಾಪಾಡುವುದು
3. ಸ್ಯಾನಿಟೈಸರ್ ಬಳಸುವುದು
4. ಲಸಿಕೆ ಪಡೆಯುವುದು.
ಧನಾತ್ಮಕ ಸಂಗತಿಯೆಂದರೆ, ಎರಡನೇ ಅಲೆ ವಕ್ಕರಿಸಿದ ಬಳಿಕ ದೇಶದಲ್ಲಿ ಹೆಚ್ಚಿನ ಸಂಖ್ಯೆ ಜನರು ಮಾಸ್ಕ್ ಧರಿಸುತ್ತಿದ್ದಾರೆ.
4. ಲಸಿಕಾ ಅಭಿಯಾನಕ್ಕೆ ಯುದ್ದದಂತೆ ಸಿದ್ದವಾಗಬೇಕು
ಇದೀಗ ಲಸಿಕೆ ಹಾಕುವ ಅಭಿಯಾನ ನಮ್ಮ ಮುಂದಿದೆ. ಸ್ಥಳೀಯ ಸಂಸ್ಥೆಗಳು ಲಸಿಕಾ ಅಭಿಯಾನಕ್ಕೆ ಯುದ್ದದಂತೆ ಸಿದ್ದವಾಗಬೇಕಿದೆ. ಹೆಚ್ಚಿನ ಜನರು ಲಸಿಕೆ ಪಡೆಯುವವರೆಗೂ ಈ ಹೋರಾಟ ಮುಂದುವರೆಯಬೇಕು. ಇನ್ನೊಂದೆಡೆ, ದೇಶದಲ್ಲಿ ಈಗಾಗಲೇ ಕೋವಿಡ್ ಪ್ರಕರಣಗಳ ಸಂಖ್ಯೆ ಮಿತಿ ಮೀರಿದೆ. ಇದು ಇನ್ನೂ ಹೆಚ್ಚಾಗಲಿವೆ ಎಂಬ ತಜ್ಞರ ಮುನ್ನೆಚ್ಚರಿಕೆ ಆತಂಕವನ್ನು ಸೃಷ್ಟಿಸಿದೆ. ಆದರೆ, ಆರೋಗ್ಯ ಬಿಕ್ಕಟ್ಟು ಹೆಚ್ಚಾದಂತೆ ಆರೋಗ್ಯ ಕ್ಷೇತ್ರದ ಮೂಲ ಸೌಕರ್ಯಗಳು ವೃದ್ದಿಯಾಗುತ್ತವೆ ಎನ್ನುವುದು ತಜ್ಞರ ಹೇಳಿಕೆ.
5. ಪರಿಸ್ಥಿತಿ ಕೈ ಮೀರಿದಾಗ ನ್ಯಾಯಾಂಗದ ಮೊರೆ
ಶವಾಗಾರಗಳು ಸ್ಮಶಾನಗಳಲ್ಲಿ ಉದ್ದದ ಸರತಿ ಸಾಲು ಇತ್ತೀಚೆಗೆ ಸಾಮಾನ್ಯವಾಗಿದೆ. ಅತೀ ಹೆಚ್ಚು ಜನ ಸಾಂಧ್ರತೆ ಹೊಂದಿರುವ ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ರಾಜಧಾನಿ ದೆಹಲಿಯಲ್ಲಿ ಹೆಚ್ಚು ಜನ ಕೋವಿಡ್ ಸೋಂಕಿಗೆ ಬಲಿಯಾಗುತ್ತಿದ್ದಾರೆ. ಕೋವಿಡ್ ಒಂದನೇ ಅಲೆ ಕೊಂಚ ಕಡಿಮೆಯಾದಾಗ ಜನರು ಮಾರ್ಗಸೂಚಿ ಪಾಲಿಸುವುದನ್ನು ಮರೆತರು. ಅಧಿಕಾರಿಗಳು ಕೂಡ ಜವಬ್ದಾರಿ ಮರೆತು ನಿರಾಳರಾದರು. ಈಗ ಪರಿಸ್ಥಿತಿ ಕೈ ಮೀರಿದಾಗ ನ್ಯಾಯಾಂಗದ ಮೊರೆ ಹೋಗಿದ್ದಾರೆ.
6. ಕಿಡಿಕಾರಿದ ಮದ್ರಾಸ್ ಹೈಕೋರ್ಟ್
ಈಗಾಗಲೇ ಸುಪ್ರೀಂಕೋರ್ಟ್ ಮತ್ತು ವಿವಿಧ ಹೈಕೋರ್ಟ್ಗಳು ಕೋವಿಡ್ ಸಂಬಂಧ ಹಲವು ಆದೇಶಗಳನ್ನು ನೀಡಿವೆ. ಕೋವಿಡ್ ನಡುವೆ ಚುನಾವಣೆ ನಡೆಸಿರುವ ವಿಷಯಕ್ಕೆ ಸಂಬಂಧಪಟ್ಟಂತೆ ಖಾರವಾಗಿ ಪ್ರತಿಕ್ರಿಯಿಸಿರುವ ಮದ್ರಾಸ್ ಹೈಕೋರ್ಟ್, ಚುನಾವಣಾ ಅಧಿಕಾರಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು ಎಂದು ಹೇಳಿದೆ. ಕೋವಿಡ್ ಉಲ್ಬಣಗೊಳ್ಳುತ್ತಿದ್ದರೂ ಸಾವಿರಾರು ಜನರನ್ನು ಸೇರಿಸಿ ಚುನಾವಣಾ ರ್ಯಾಲಿಗಳನ್ನು ನಡೆಸಿರುವುದಕ್ಕೆ ಕೆಂಡಾಮಂಡಲವಾದ ಹೈಕೋರ್ಟ್, ರ್ಯಾಲಿಗಳು ನಡೆಯುತ್ತಿರುವುದು ಅನ್ಯ ಗ್ರಹದಲ್ಲಿಯಾ ಎಂದು ಪ್ರಶ್ನಿಸಿದೆ.
7. ಜವಾಬ್ದಾರಿ ಮರೆತ ನಾಯಕರು
ಚುನಾವಣಾ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲು ಬಂದ ರಾಜಕೀಯ ನಾಯಕರು ಯಾವುದೇ ಮುನ್ನೆಚ್ಚರಿಕ ಕ್ರಮಗಳನ್ನು ಪಾಲಿಸಲಿಲ್ಲ ಮತ್ತು ಅದರ ಬಗ್ಗೆ ಜನರಿಗೆ ತಿಳಿ ಹೇಳಿಯೂ ಇಲ್ಲ. ಕೊಲ್ಕತ್ತಾದಲ್ಲಿ ನಡೆದ ರ್ಯಾಲಿಗಳಲ್ಲಿ ಪಾಲ್ಗೊಂಡ ಪ್ರತಿ ಇಬ್ಬರಲ್ಲಿ ಕೋವಿಡ್ ಕಂಡು ಬಂದರೂ ಆಶ್ಚರ್ಯವೇನಿಲ್ಲ.
8. ಕುಂಭಮೇಳದ ಸಮರ್ಥನೆ
ಉತ್ತರ ಪ್ರದೇಶ ಮತ್ತು ಉತ್ತರಾಖಂಡಗಳಲ್ಲಿ ನಡೆದ ಕುಂಭ ಮೇಳದ ಬಗ್ಗೆ ಮಾತನಾಡುವ ಹಾಗೆಯೇ ಇಲ್ಲ. ಅಲ್ಲಿ ಲಕ್ಷಾಂತರ ಜನ ಕೋವಿಡ್ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ ಒಂದೆಡೆ ಸೇರಿದರು. ಇದನ್ನು ತಡೆದು ತಿಳಿ ಹೇಳಬೇಕಾದ ರಾಜಕೀಯ ನಾಯಕರು, ಅದು ಬಯಲು ಪ್ರದೇಶಗಳಲ್ಲಿ ನಡೆಯುತ್ತಿದೆ. ಕುಂಭಮೇಳದಲ್ಲಿ ಸ್ನಾನ ಮಾಡಿದರೆ ಕೋವಿಡ್ ಸೋಂಕು ಬರಲ್ಲ ಎಂಬ ಸಮರ್ಥನೆಯ ಮಾತುಗಳನ್ನು ಆಡಿದರು. ಇದು ಇನ್ನಷ್ಟು ಮಾರ್ಗಸೂಚಿ ಉಲ್ಲಂಘಣೆಗೆ ಕಾರಣವಾಯಿತು. ಈ ಎಲ್ಲವೂ ಕೋವಿಡ್ ಎರಡನೇ ಅಲೆ ಮತ್ತು ದೇಶದಲ್ಲಿ ಈ ರೀತಿಯ ಆರೋಗ್ಯ ಬಿಕ್ಕಟ್ಟಿಗೆ ಕಾರಣವೆಂದರೆ ತಪ್ಪಾಗಲಾರದು.