ನವದೆಹಲಿ: ಜಾಗತಿಕ ಹಸಿವು ಸೂಚ್ಯಂಕ (GHI-Global Hunger Index) ಪ್ರಕಟವಾಗಿದೆ. ಇಲ್ಲಿ ಜಗತ್ತಿನ ಸುಮಾರು 116 ರಾಷ್ಟ್ರಗಳಲ್ಲಿರುವ ಹಸಿವಿನ ಬಗ್ಗೆ ಅಂಕಿಅಂಶಗಳನ್ನು ಸಂಗ್ರಹಿಸಿ ಶ್ರೇಯಾಂಕವನ್ನು ನೀಡಲಾಗಿದೆ. 2021ರ ಹಸಿವು ಸೂಚ್ಯಂಕದ ಪ್ರಕಾರ ಹಸಿವಿನ ವಿಚಾರದಲ್ಲಿ ಭಾರತದ ಸ್ಥಿತಿ ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳ ದೇಶಗಳಿಗಿಂತ ಹೀನಾಯವಾಗಿದೆ.
ಐರಿಷ್ ಸಂಘಟನೆಯಾದ ಕನ್ಸರ್ನ್ ವರ್ಲ್ಡ್ವೈಡ್ (Concern Worldwide) ಮತ್ತು ಜರ್ಮನ್ ಸಂಘಟನೆ ವೆಲ್ಟ್ ಹಂಗರ್ ಹಿಲ್ಫ್ (Welt Hunger Hilfe) ವರದಿಯನ್ನು ಪ್ರಕಟಿಸಿದ್ದು, ಭಾರತದಲ್ಲಿನ ಹಸಿವಿನ ತೀವ್ರತೆಯ ಬಗ್ಗೆ ವರದಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.
ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತದ ಸ್ಥಾನ 116 ರಾಷ್ಟ್ರಗಳ ಪೈಕಿ 101 ಆಗಿದೆ. 2020ನೇ ವರ್ಷದ ಅವಧಿಯಲ್ಲಿ 107 ರಾಷ್ಟ್ರಗಳ ಪೈಕಿ ಭಾರತ 94 ಸ್ಥಾನದಲ್ಲಿದ್ದು, ಈಗ 12 ಸ್ಥಾನಗಳ ಕುಸಿತ ಕಂಡಿದೆ. ಈ ವರ್ಷದ ಶ್ರೇಯಾಂಕದ ಪ್ರಕಾರ ಪಾಕಿಸ್ತಾನ (92 ಸ್ಥಾನ) , ನೇಪಾಳ (76ನೇ ಸ್ಥಾನ), ಬಾಂಗ್ಲಾದೇಶ (76ನೇ ಸ್ಥಾನ ) ರಾಷ್ಟ್ರಗಳಿಗಿಂತ ಹಸಿವಿನ ಪ್ರಮಾಣ ಭಾರತದಲ್ಲಿ ಹೆಚ್ಚಾಗಿದೆ.