ಕರ್ನಾಟಕ

karnataka

ETV Bharat / bharat

2024ಕ್ಕೆ ಅಮೆರಿಕಕ್ಕೆ ಸರಿಸಾಟಿಯಾಗಲಿದೆ ಭಾರತದ ರಾಷ್ಟ್ರೀಯ ಹೆದ್ದಾರಿ ಜಾಲ: ಸಚಿವ ಗಡ್ಕರಿ

ಇನ್ನೊಂದು ವರ್ಷದಲ್ಲಿ ಭಾರತದ ಹೆದ್ದಾರಿ ವ್ಯವಸ್ಥೆಯು ಅಮೆರಿಕದ ಹೆದ್ದಾರಿ ವ್ಯವಸ್ಥೆಗೆ ಸರಿಸಮನಾಗಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಕೈಲಾಸ ಮಾನಸ ಸರೋವರ ಯೋಜನೆಯ ಶೇಕಡಾ 93 ರಷ್ಟು ಕೆಲಸ ಪೂರ್ಣಗೊಂಡಿದೆ ಎಂದು ಅವರು ತಿಳಿಸಿದ್ದಾರೆ.

2024ಕ್ಕೆ ಅಮೆರಿಕಕ್ಕೆ ಸರಿಸಾಟಿಯಾಗಲಿದೆ ಭಾರತದ ರಾಷ್ಟ್ರೀಯ ಹೆದ್ದಾರಿ ಜಾಲ: ಸಚಿವ ಗಡ್ಕರಿ
Indias highways infra to match US by 2024 Gadkari

By

Published : Mar 26, 2023, 1:17 PM IST

ರಾಂಚಿ :ಭಾರತದ ಹೆದ್ದಾರಿ ವ್ಯವಸ್ಥೆಯು 2024ರ ವೇಳೆಗೆ ಅಮೆರಿಕದ ಹೆದ್ದಾರಿ ವ್ಯವಸ್ಥೆಗೆ ಸರಿಸಾಟಿಯಾಗಿ ನಿಲ್ಲಲಿದೆ. ಇದಕ್ಕಾಗಿ ಗ್ರೀನ್ ಎಕ್ಸ್​ಪ್ರೆಸ್​ವೇ ಮತ್ತು ರೈಲ್ವೆ ಓವರ್ ಬ್ರಿಜ್​ಗಳು ಸೇರಿದಂತೆ ಇತರ ಹೆದ್ದಾರಿ ಸೌಲಭ್ಯಗಳನ್ನು ನಿಗದಿತ ಕಾಲಾವಧಿಯಲ್ಲಿ ಮಿಷನ್ ಮೋಡ್ ಮಾದರಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. 'ಭಾರತಮಾಲಾ 2' ಗೆ ಕ್ಯಾಬಿನೆಟ್ ಅನುಮೋದನೆ ಶೀಘ್ರದಲ್ಲೇ ಸಿಗುವ ಸಾಧ್ಯತೆಯಿದೆ ಮತ್ತು ಅದರ ನಂತರ ದೇಶದಲ್ಲಿ ಮೂಲಸೌಕರ್ಯದ ಅವಶ್ಯಕತೆಗಳನ್ನು ಪೂರೈಸುವಲ್ಲಿ ತುಂಬಾ ಅನುಕೂಲವಾಗಲಿದೆ ಎಂದು ಅವರು ಹೇಳಿದರು.

2024 ರ ವೇಳೆಗೆ ಭಾರತದ ಹೆದ್ದಾರಿಗಳು ಅಮೆರಿಕದ ಹೆದ್ದಾರಿಗಳಿಗೆ ಸಮನಾಗಿರುತ್ತವೆ ಎಂದು ನನಗೆ ವಿಶ್ವಾಸವಿದೆ. ಭಾರತದ ಉದ್ದಗಲಕ್ಕೂ ಹಸಿರು ಎಕ್ಸ್‌ಪ್ರೆಸ್‌ವೇಗಳ ನೆಟ್‌ವರ್ಕ್ ಸೇರಿದಂತೆ ದೃಢವಾದ ಮೂಲಸೌಕರ್ಯವನ್ನು ನಿರ್ಮಿಸಲು ಸಮಯ ಬದ್ಧ ಮಿಷನ್ ಮೋಡ್‌ನಲ್ಲಿ ಕೆಲಸ ನಡೆಯುತ್ತಿದೆ ಎಂದು ಗಡ್ಕರಿ ಸಂದರ್ಶನವೊಂದರಲ್ಲಿ ಹೇಳಿದರು. ರೈಲ್ವೆ ಮೇಲುಸೇತುವೆಗಳ ನಿರ್ಮಾಣಕ್ಕೆ ಈ ವರ್ಷ 16 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಮುಂದಿನ 5 ವರ್ಷಗಳಲ್ಲಿ ಈ ವೆಚ್ಚವನ್ನು 50 ಸಾವಿರ ಕೋಟಿ ರೂಪಾಯಿಗಳಿಗೆ ಹೆಚ್ಚಿಸಲಾಗುವುದು ಎಂದು ಗಡ್ಕರಿ ತಿಳಿಸಿದರು.

ಪಿಥೋರಗಢ್ ಮೂಲಕ ಸಾಗುವ ಕೈಲಾಸ ಮಾನಸ ಸರೋವರ ಹೆದ್ದಾರಿ ಯೋಜನೆಯ ಬಗ್ಗೆ ಮಾತನಾಡಿದ ಗಡ್ಕರಿ, ಕೈಲಾಸ ಮಾನಸ ಸರೋವರ ಯೋಜನೆಯ ಶೇಕಡಾ 93 ರಷ್ಟು ಕೆಲಸ ಪೂರ್ಣಗೊಂಡಿದೆ ಎಂದರು. ಒಂದು ಬಾರಿ ಈ ಯೋಜನೆ ಪೂರ್ಣಗೊಂಡ ನಂತರ ಎತ್ತರದ ಬೆಟ್ಟ ಗುಡ್ಡಗಳನ್ನು ಹತ್ತಿ ಪ್ರಯಾಣಿಸುವ ಕಷ್ಟ ತಪ್ಪಲಿದೆ. ಇದರಿಂದ ಕೈಲಾಸ್ ಮಾನಸರೋವರ ಯಾತ್ರಾರ್ಥಿಗಳಿಗೆ ಪ್ರಯಾಣ ಸುಖಕರವಾಗಲಿದ್ದು, ಪ್ರಯಾಣದ ಅವಧಿ ಹಲವಾರು ದಿನಗಳಷ್ಟು ಕಡಿಮೆಯಾಗಲಿದೆ ಎಂದು ಅವರು ಹೇಳಿದರು. ಪ್ರಸ್ತುತ, ಸಿಕ್ಕಿಂ ಅಥವಾ ನೇಪಾಳ ಮಾರ್ಗಗಳ ಮೂಲಕ ಕೈಲಾಸ ಮಾನಸ ಸರೋವರಕ್ಕೆ ಪ್ರಯಾಣಿಸಲು ಸುಮಾರು ಎರಡರಿಂದ ಮೂರು ವಾರಗಳು ಬೇಕಾಗುತ್ತದೆ.

ಭಾರತಮಾಲಾ 2ನೇ ಹಂತದ ಬಗ್ಗೆ ಮಾತನಾಡಿದ ಸಚಿವರು, ಭಾರತಮಾಲಾ 2 ನೇ ಹಂತಕ್ಕೆ ಶೀಘ್ರದಲ್ಲೇ ಅನುಮೋದನೆ ದೊರೆಯುವ ಸಾಧ್ಯತೆಯಿದೆ ಮತ್ತು ಅದು ಹೆದ್ದಾರಿಗಳ ನಿರ್ಮಾಣವನ್ನು ಇನ್ನಷ್ಟು ವೇಗಗೊಳಿಸುತ್ತದೆ ಎಂದರು. ಆರಂಭಿಕವಾಗಿ 2ನೇ ಹಂತದಲ್ಲಿ ಸುಮಾರು 5,000 ಕಿಮೀ ಹೆದ್ದಾರಿ ಜಾಲವನ್ನು ನಿರ್ಮಾಣ ಮಾಡುವ ಗುರಿಯಿದೆ. ಭಾರತ್ ಮಾಲಾ ಯೋಜನೆಯು ಸುಮಾರು 35,000 ಕಿಮೀ ರಾಷ್ಟ್ರೀಯ ಹೆದ್ದಾರಿ ಕಾರಿಡಾರ್‌ಗಳನ್ನು ಅಭಿವೃದ್ಧಿಪಡಿಸುವ ಭಾರತದ ಅತಿದೊಡ್ಡ ಮೂಲಸೌಕರ್ಯ ಕಾರ್ಯಕ್ರಮವಾಗಿದ್ದು, ರಾಷ್ಟ್ರದ 580 ಜಿಲ್ಲೆಗಳನ್ನು ಸಂಪರ್ಕಿಸುತ್ತದೆ. ಮೂಲಸೌಕರ್ಯ ಅಭಿವೃದ್ಧಿಯನ್ನು ಕಾರಿಡಾರ್ ವಿಧಾನಕ್ಕೆ ಬದಲಾಯಿಸಿದ್ದಕ್ಕೆ ಇದು ಪ್ರಮುಖ ಮಾದರಿಯಾಗಿದೆ.

ಜಾರ್ಖಂಡ್‌ನಲ್ಲಿ ಏಳು ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇಗಳು, ಆರ್ಥಿಕ ಕಾರಿಡಾರ್ ಮತ್ತು ಇಂಟರ್ ಕಾರಿಡಾರ್‌ಗಳನ್ನು 70,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಒಡಿಶಾ, ಛತ್ತೀಸ್‌ಗಢ, ಪಶ್ಚಿಮ ಬಂಗಾಳ, ಬಿಹಾರ ಮತ್ತು ಉತ್ತರಪ್ರದೇಶದಂತಹ ರಾಜ್ಯಗಳಿಗೆ ಉತ್ತಮ ಸಂಪರ್ಕ ವ್ಯವಸ್ಥೆ ನಿರ್ಮಾಣಕ್ಕಾಗಿ 50,000 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳನ್ನು ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ : ದಶಪಥ ರಸ್ತೆಯ ಸಂಪೂರ್ಣ ಕ್ರೆಡಿಟ್ ಪ್ರಧಾನಿ ಮೋದಿಗೆ ಸಲ್ಲಬೇಕು: ಸಿಎಂ ಬಸವರಾಜ ಬೊಮ್ಮಾಯಿ

ABOUT THE AUTHOR

...view details