ನವದೆಹಲಿ : ಕೋವಿಡ್-19 ಲಸಿಕಾ ಅಭಿಯಾನವನ್ನು ಭಾರತ ಯಶಸ್ವಿಯಾಗಿ ನಿರ್ವಹಿಸಿದೆ ಎಂದು ಬಿಲ್ ಆ್ಯಂಡ್ ಮೆಲಿಂಡಾ ಗೇಟ್ಸ್ ಫೌಂಡೇಶನ್ ಸಹ ಅಧ್ಯಕ್ಷೆ ಮೆಲಿಂಡಾ ಫ್ರೆಂಚ್ ಗೇಟ್ಸ್ ಶ್ಲಾಘಿಸಿದ್ದು, ಕೋವಿಡ್ ನಿಯಂತ್ರಣಕ್ಕಾಗಿ ಭಾರತ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ ಮನ್ಸುಖ್ ಮಾಂಡವಿಯಾ ಅವರನ್ನು ಭೇಟಿ ಮಾಡಿದ ಮೆಲಿಂಡಾ ಗೇಟ್ಸ್, ದೇಶದ ಯಶಸ್ವಿ ಕೋವಿಡ್ ಲಸಿಕೆ ಅಭಿಯಾನಕ್ಕಾಗಿ ಸಚಿವರನ್ನು ಅಭಿನಂದಿಸಿದರು.
ಡಾ. ಮನ್ಸುಖ್ ಮಾಂಡವಿಯಾ ಮತ್ತು ಮೆಲಿಂಡಾ ಗೇಟ್ಸ್ ಅವರು ಭಾರತದಲ್ಲಿ ಆರೋಗ್ಯ ಕ್ಷೇತ್ರದಲ್ಲಿನ ಸುಧಾರಣೆಗಳು ಮತ್ತು ಹೊಸ ಅವಕಾಶಗಳ ಬಗ್ಗೆ ವಿವರವಾಗಿ ಚರ್ಚಿಸಿದರು. ವಿಶೇಷವಾಗಿ ಆಯುಷ್ಮಾನ್ ಭಾರತ್ ಅಡಿ ಆರೋಗ್ಯ ಮೂಲಸೌಕರ್ಯ ಮತ್ತು ಡಿಜಿಟಲ್ ಆರೋಗ್ಯ ಮಿಷನ್ ಬಲಪಡಿಸಲು ಒತ್ತು ನೀಡಿದರು ಎಂದು ಪ್ರಕಟಣೆ ತಿಳಿಸಿದೆ. ಆರೋಗ್ಯ ಸಚಿವಾಲಯದ ಇತ್ತೀಚಿನ ಕಾರ್ಯಕ್ರಮ ಮತ್ತು ನೀತಿಗಳನ್ನು ಶ್ಲಾಘಿಸಿದ ಅವರು, ಮಹಿಳೆಯರು ಮತ್ತು ಯುವತಿಯರಿಗೆ ಈ ಹಿಂದೆಂದಿಗಿಂತಲೂ ಹೆಚ್ಚು ಅವಕಾಶಗಳನ್ನು ಆರೋಗ್ಯ ಸಚಿವಾಲಯ ಒದಗಿಸಿದೆ ಎಂದು ಹೇಳಿದರು.
ವಿಶೇಷವಾಗಿ ಭಾರತ ಜಿ20 ಅಧ್ಯಕ್ಷತೆಯನ್ನು ವಹಿಸಿಕೊಂಡಿರುವ ಹಿನ್ನೆಲೆಯಲ್ಲಿ ಜಾಗತಿಕ ಸಾರ್ವಜನಿಕ ಆರೋಗ್ಯಕ್ಕಾಗಿ ಭಾರತೀಯ ಲಸಿಕೆ ತಯಾರಿಕೆ ಮತ್ತು ಡಿಜಿಟಲ್ ಸೌಲಭ್ಯಗಳನ್ನು ಬಳಸಿಕೊಳ್ಳುವ ಅವಕಾಶಗಳ ಬಗ್ಗೆ ಅವರು ಚರ್ಚಿಸಿದರು. ಇದೇ ಸಂದರ್ಭದಲ್ಲಿ ಡಾ. ಮಾಂಡವಿಯಾ ಮತ್ತು ಮೆಲಿಂಡಾ ಗೇಟ್ಸ್, 'ಗ್ರಾಸ್‌ರೂಟ್ ಸೋಲ್ಜರ್ಸ್: ಭಾರತದಲ್ಲಿ COVID-19 ಸಾಂಕ್ರಾಮಿಕ ನಿರ್ವಹಣೆಯಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ANM ಗಳ ಪಾತ್ರ' ಎಂಬ ಶೀರ್ಷಿಕೆಯ ವರದಿ ಅನಾವರಣಗೊಳಿಸಿದರು.