ನವದೆಹಲಿ :ಭಾರತದ ಪ್ರಾಥಮಿಕ ಶಾಲೆಗಳಲ್ಲಿ ವಿವಿಧ ಯೋಜನೆಗಳ ಮೂಲಕ ಉಚಿತ ಆಹಾರ ಪಡೆದ ತಾಯಂದಿರು ಮತ್ತು ಅವರ ಮಕ್ಕಳು ಅತ್ಯುತ್ತಮ ಬೆಳವಣಿಗೆ ಕಾಣುತ್ತಿದ್ದಾರೆ. ಇಂಥಹ ಯೋಜನೆಗಳು ಮಕ್ಕಳ ಪೌಷ್ಟಿಕತೆ ಹೆಚ್ಚಿಸಲು ಅನುಕೂಲವಾಗಿದೆ ಎಂದು ಎಂದು ವರದಿಯೊಂದು ಹೇಳಿದೆ.
ಅಮೆರಿಕದ ಇಂಟರ್ನ್ಯಾಷನಲ್ ಫುಡ್ ಪಾಲಿಸಿ ರಿಸರ್ಚ್ ಪ್ರೋಗ್ರಾಂನ ಸಂಶೋಧಕರ ಪ್ರಕಾರ ಭಾರತದಲ್ಲಿ ಅಪೌಷ್ಟಿಕತೆಯಿಂದ ಕೂಡಿದ ಅತಿ ಹೆಚ್ಚು ಮಕ್ಕಳಿದ್ದು, ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟದ ಯೋಜನೆ ಶಾಲೆಗಳಲ್ಲಿ ಮಕ್ಕಳಿಗೆ ಆಹಾರ ನೀಡುವ ವಿಶ್ವದ ಅತಿ ದೊಡ್ಡ ಯೋಜನೆಯಾಗಿದೆ ಎಂದು ಅಭಿಪ್ರಾಯಪಟ್ಟಿದೆ.
1993ರಿಂದ 2016ರವರೆಗಿನ ಮಾಹಿತಿಯನ್ನು ಸಂಶೋಧಕರು ವಿಶ್ಲೇಷಿಸಿದ್ದು, ಮಧ್ಯಾಹ್ನದ ಬಿಸಿಯೂಟ ಯೋಜನೆ ಮಕ್ಕಳ ಬೆಳವಣಿಗೆಗೆ ಕಾರಣವಾಗುವುದಲ್ಲದೇ ಒಂದು ಪೀಳಿಗೆಯ ಸುಧಾರಣೆಗೆ ಬೆಂಬಲ ನೀಡುತ್ತದೆ ಎಂದು ವರದಿಯಲ್ಲಿ ಮಾಹಿತಿ ನೀಡಿದ್ದಾರೆ.
ಹಿಂದಿನ ದಶಕಗಳಲ್ಲಿ ಮಕ್ಕಳಿಗೆ ಶಾಲಾ ಆಹಾರ ನೀಡುವುದರಲ್ಲಿ ಮಾಡಲಾದ ಹೂಡಿಕೆಗಳು, ಭವಿಷ್ಯದಲ್ಲಿ ಮಕ್ಕಳ ಬೆಳವಣಿಗೆ ಮತ್ತು ಸುಧಾರಣೆಗೆ ಸಂಬಂಧಿಸಿವೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.