ಚೆನ್ನೈ: ಭಾರತದ ಮೊದಲ ಮಾನವಸಹಿತ ಸಾಗರ ಮಿಷನ್ 'ಸಮುದ್ರಯಾನ'ಕ್ಕೆ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಹಸಿರು ನಿಶಾನೆ ತೋರಿಸಿದ್ದಾರೆ. ಈ ಮೂಲಕ ಕೆಲವೇ ಇಂತಹ ಸಾಧನೆ ಮಾಡಿದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಸೇರಿದೆ.
ರಾಷ್ಟ್ರವು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರಿ ಪ್ರಗತಿಯನ್ನು ಸಾಧಿಸಿದೆ ಮತ್ತು ಗಗನ್ಯಾನ್ ಕಾರ್ಯಕ್ರಮದ ಭಾಗವಾಗಿ ಭಾರತೀಯರು ಬಾಹ್ಯಾಕಾಶಕ್ಕೆ ಹೋದಾಗ, ಮತ್ತೊಬ್ಬರು ಸಮುದ್ರದ ಆಳಕ್ಕೆ ಧುಮುಕುತ್ತಾರೆ ಎಂದು ಸಚಿವರು ಹೊಗಳಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಭಾರತದ ಮೊದಲ ಮಾನವ ಸಹಿತ ಸಾಗರ ಮಿಷನ್ ಸಮುದ್ರಯಾನವನ್ನು ಚೆನ್ನೈನಲ್ಲಿ ಪ್ರಾರಂಭಿಸಲಾಯಿತು. USA, ರಷ್ಯಾ, ಜಪಾನ್, ಫ್ರಾನ್ಸ್ ಮತ್ತು ಚೀನಾದ ಇಂತಹ ನೀರೊಳಗಿನ ವಾಹನಗಳನ್ನು ಹೊಂದಿರುವ ಎಲೈಟ್ ಕ್ಲಬ್‌ಗೆ ನಮ್ಮ ರಾಷ್ಟ್ರವೂ ಸೇರಿದೆ. ಈ ಮೂಲಕ ನೀಲಿ ಆರ್ಥಿಕತೆ ಹೆಚ್ಚಲಿದೆ ಎಂದಿದ್ದಾರೆ.
ಇಲ್ಲಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಶಿಯನ್ ಟೆಕ್ನಾಲಜಿಯಲ್ಲಿ ತಮ್ಮ ಲೋಕಾರ್ಪಣಾ ಭಾಷಣದಲ್ಲಿ ಮಾತನಾಡಿ, ಈ ಮಿಷನ್ ವೈಜ್ಞಾನಿಕ ಸಾಮರ್ಥ್ಯವನ್ನು ಹೆಚ್ಚಿಸುವುದಲ್ಲದೆ ರಾಷ್ಟ್ರಕ್ಕೆ ಗೌರವದ ಭಾವನೆಯನ್ನು ನೀಡುತ್ತದೆ. ನಾವು ವಿಶ್ವದ ಯಾವುದೇ ದೇಶಕ್ಕಿಂತ ಕಡಿಮೆಯಿಲ್ಲದ ಕೆಲಸವನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.