ಪಣಜಿ(ಗೋವಾ): ಎಲ್ಲಾದರು ಟೂರ್ ಹೋಗೋಣ ಅಂದ್ರೆ ಅನೇಕರು ಥಟ್ ಅಂತ ಗೋವಾ ಹೆಸರು ಹೇಳಿಬಿಡುತ್ತಾರೆ. ಹೌದು, ಪ್ರವಾಸಿಗರ ಸ್ವರ್ಗ ದೇಶದ ಕಡಲ ಕಿನಾರೆಯ ಪುಟ್ಟ ರಾಜ್ಯ ಗೋವಾ. ಇಲ್ಲಿಗೆ ದೇಶ ವಿದೇಶಗಳಿಂದ ಸಹಸ್ರಾರು ಪ್ರವಾಸಿಗರು ಬಂದು ಮೋಜು, ಮಸ್ತಿ ಮಾಡುತ್ತಾರೆ. ಸರ್ಕಾರಕ್ಕೂ ಟೂರಿಸಂ ಬಹುದೊಡ್ಡ ಆದಾಯ ತಂದುಕೊಡುವ ಕ್ಷೇತ್ರ.
ಇಂಥ ಸುಂದರ ತಾಣ ಗೋವಾಗೆ ಪ್ರಯಾಣಿಸುವವರಿಗೆ ಇಲ್ಲೊಂದು ಸ್ವೀಟ್ ನ್ಯೂಸ್ ಇದೆ. ಒಂದು ವೇಳೆ ನೀವೇನಾದರೂ ಮದ್ಯಪ್ರಿಯರಾದರೆ ಮುಗಿದೇ ಹೋಯ್ತು ಬಿಡಿ!. ಹೌದು, ನೀವು ಮುಂದಿನ ದಿನಗಳಲ್ಲಿ ಗೋವಾಗೆ ಹೋಗುವಿರಾದರೆ ಅಲ್ಲಿರುವ ದೇಶದ ಮೊಟ್ಟಮೊದಲ ಆಲ್ಕೋಹಾಲ್ ಮ್ಯೂಸಿಯಂ ಅರ್ಥಾತ್ ಮದ್ಯ ವಸ್ತು ಸಂಗ್ರಹಾಲಯಕ್ಕೂ ಒಮ್ಮೆ ಭೇಟಿ ಕೊಡಬಹುದು.
ಅಲ್ಲೇನಿದೆ ವಿಶೇಷ?
ಹೌದು, ನಿಮಗಿಲ್ಲಿ ಅಚ್ಚರಿ ಕಾದಿದೆ. ದೇಶದ ಮೊಟ್ಟ ಮೊದಲ ಆಲ್ಕೋಹಾಲ್ ಮ್ಯೂಸಿಯಂ ಆರಂಭವಾಗಿದೆ. ಅಯ್ಯೋ ಬೇಡಪ್ಪಾ ನಾವು ಮದ್ಯ ಸೇವಿಸಲ್ಲ ಅನ್ನೋರಿಗೂ ಇದೊಮ್ಮೆ ಭೇಟಿ ನೀಡಬೇಕಿರುವ ತಾಣ. ಏಕೆಂದರೆ ಇಲ್ಲಿರುವ ಪುರಾತನ ಸಲಕರಣೆಗಳು ಎಂಥವರನ್ನೂ ಅರೆಕ್ಷಣ ಕುತೂಹಲದ ಲೋಕಕ್ಕೆ ಕರೆದೊಯ್ಯುತ್ತವೆ.
ಸಾವಿರಾರು ವರ್ಷಗಳಷ್ಟು ಹಿಂದೆಲ್ಲಾ ಮದ್ಯವನ್ನು ಸಂಗ್ರಹಿಸಿಡುತ್ತಿದ್ದ ನೂರಾರು ಮೋಹಕ ಮಣ್ಣಿನ ಪಿಪಾಯಿಗಳು, ಕೊಪ್ಪರಿಗೆ, ಕಡಾಯಿ. ಅಷ್ಟೇ ಅಲ್ಲ, ಆಧುನಿಕ ಜಗತ್ತಿನ ಗಾಜಿನ ಸಲಕರಣೆಗಳನ್ನು ನೀವಿಲ್ಲಿ ಕಾಣಬಹುದು. ಇಂದಿನ ದಿನಮಾನಗಳಲ್ಲಿ ಬಲು ಅಪರೂಪದಂತೆ ಗೋಚರಿಸುವ ಗೋಲಿ ಸೋಡಾ ಬಾಟಲಿಗಳು ಸೇರಿದಂತೆ ಹತ್ತು ಹಲವು ಬಗೆಯ ಸಲಕರಣೆಗಳು ಇಲ್ಲಿ ನೂರಾರಿವೆ. ಅವುಗಳನ್ನು ಆಸ್ಥೆಯಿಂದ ಸಂಗ್ರಹಿಸಿ ಪ್ರವಾಸಿಗರಿಗೆ ತೆರೆದಿಟ್ಟಿದ್ದಾರೆ. ಹಿಂದೆಲ್ಲಾ ನಮ್ಮ ಪೂರ್ವಜರು ಮದ್ಯಕ್ಕೆ ಮರುಳಾಗಿ ಇಂಥ ವಿಶಿಷ್ಟ ಪಾತ್ರೆಗಳನ್ನು ಅವನ್ನು ಸ್ಟೋರ್ ಮಾಡಿ ಇಡುತ್ತಿದ್ದರಂತೆ. ಅಂದಹಾಗೆ, ಈ ಮ್ಯೂಸಿಯಂ ಅನ್ನು ಇಲ್ಲಿನ ಉದ್ಯಮಿ ನಂದನ್ ಕುಡ್ಚಾಡ್ಕರ್ ಎಂಬವರು ಉತ್ತರ ಗೋವಾದ ಕಾಂಡೋಲಿಮ್ ಗ್ರಾಮದಲ್ಲಿ ತೆರೆದಿದ್ದಾರೆ.