ನವದೆಹಲಿ:ಸಾಂಕ್ರಾಮಿಕ ಕೊರೊನಾವನ್ನು ನಿಯಂತ್ರಿಸಲು ಈಗಾಗಲೇ ಕೋವಿಶೀಲ್ಡ್, ಕೊವ್ಯಾಕ್ಸಿನ್ ಲಸಿಕೆಗಳನ್ನು ಕಂಡುಹಿಡಿದು ಚುಚ್ಚುಮದ್ದಾಗಿ ನೀಡಲಾಗುತ್ತಿದೆ. ಭಾರತ್ ಬಯೋಟೆಕ್ ಸಂಸ್ಥೆ ಮೂಗಿನ ಮೂಲಕವೂ ಲಸಿಕೆ ನೀಡುವ ವಿಧಾನವನ್ನು ಕಂಡು ಹಿಡಿದಿದ್ದು, ಇದಕ್ಕೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(ಡಿಸಿಜಿಐ) ತುರ್ತು ಬಳಕೆಗೆ ಅನುಮತಿ ನೀಡಿದೆ. ಈ ಮೂಲಕ ದೇಶದ ಮೊದಲ ಮೂಗಿನ ಮೂಲಕ ನೀಡುವ ಲಸಿಕೆ ಜನರಿಗೆ ಲಭ್ಯವಾಗಲಿದೆ.
ಮೂಗಿನ ಮೂಲಕ ಕೋವಿಡ್ ಲಸಿಕೆಯನ್ನು ನೀಡುವ ವಿಧಾನವನ್ನು ಭಾರತ್ ಬಯೋಟೆಕ್ ಕಂಡುಕೊಂಡಿದ್ದು, ಇದರ ಅನುಮೋದನೆಗಾಗಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾಗೆ(ಡಿಸಿಜಿಐ) ಮನವಿ ಮಾಡಿತ್ತು. ಇದರ ತುರ್ತು ಬಳಕೆಗೆ ಡಿಸಿಜಿಐ ಒಪ್ಪಿಗೆ ನೀಡಿದೆ.
ಕೊರೊನಾ ತಡೆಗೆ ನೀಡಲಾಗುವ ಕೊವ್ಯಾಕ್ಸಿನ್ ಲಸಿಕೆಯನ್ನು ಭಾರತ್ ಬಯೋಟೆಕ್ ಈಗಾಗಲೇ ದೇಶ, ವಿದೇಶಗಳಿಗೆ ಸರಬರಾಜು ಮಾಡುತ್ತಿದೆ. ಚುಚ್ಚುಮದ್ದು ಮಾದರಿಯಲ್ಲಿ ಇದನ್ನು ನೀಡಲಾಗುತ್ತಿದೆ. ಮೂಗಿನ ಮೂಲಕ ಲಸಿಕೆಯನ್ನು ಹಾಕಿ ಸೋಂಕನ್ನು ಶೀಘ್ರವಾಗಿ ತಡೆಗಟ್ಟುವ ವಿಧಾನವನ್ನು ಭಾರತ್ ಬಯೋಟೆಕ್ ಪರೀಕ್ಷಿಸಿತ್ತು.