ತ್ರಿಶೂರ್(ಕೇರಳ) :ಭಾರತದ ಮೊದಲ ಕೋವಿಡ್ ಸೋಂಕಿತ ಯುವತಿಗೆ ಮತ್ತೊಮ್ಮೆ ಕೊರೊನಾ ಸೋಂಕು ಕಾಣಿಸಿದೆ. ಯುವತಿಯಲ್ಲಿ ಲಕ್ಷಣ ರಹಿತ ಸೋಂಕು ಕಂಡು ಬಂದಿದೆ ಎಂದು ಕೇರಳದ ಆರೋಗ್ಯ ಪ್ರಾಧಿಕಾರಗಳು ಮಾಹಿತಿ ನೀಡಿವೆ.
ಆ್ಯಂಟಿಜೆನ್ ಟೆಸ್ಟ್ನಲ್ಲಿ ನೆಗೆಟಿವ್ ಬಂದಿದ್ದು, ಆರ್ಟಿ-ಪಿಸಿಆರ್ ಟೆಸ್ಟ್ ಪಾಸಿಟಿವ್ ಬಂದಿದೆ ಎಂದು ತ್ರಿಶೂರ್ನ ಡಿಎಂಒ ಡಾ.ಕೆ ಜೆ ರೀನಾ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಯುವತಿಯ ಗಂಟಲು ದ್ರವದ ಮಾದರಿಗಳನ್ನು ಸಂಶೋಧನೆಗಾಗಿ ನವದೆಹಲಿಯಲ್ಲಿ ಪರೀಕ್ಷಿಸಿದಾಗ ಕೋವಿಡ್ ಪಾಸಿಟಿವ್ ಆಗಿರುವುದು ಕಂಡು ಬಂದಿದೆ.
ಯುವತಿಗೆ ಈಗ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಯುವತಿಗೆ ಸೂಚನೆ ನೀಡಲಾಗಿದೆ.
ಯುವತಿಯು ಚೀನಾದ ವುಹಾನ್ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಯುವತಿಗೆ ಮೂರನೇ ವರ್ಷದ ಸೆಮಿಸ್ಟರ್ನ ರಜಾದಿನಗಳಲ್ಲಿ ಆಗಮಿಸಿದ ನಂತರ ಸೋಂಕು ಪರೀಕ್ಷೆ ನಡೆಸಿದಾಗ ಜನವರಿ 30,2020ರಂದು ಆಕೆಯಲ್ಲಿ ಸೋಂಕು ದೃಢಪಟ್ಟಿತ್ತು.
ಎರಡು ವಾರಗಳವರೆಗೆ ತ್ರಿಶೂರ್ ಮೆಡಿಕಲ್ ಕಾಲೇಜಿನಲ್ಲಿ ಆಕೆಗೆ ಚಿಕಿತ್ಸೆ ನೀಡಲಾಗಿದ್ದು, ನಂತರ ಎರಡು ಬಾರಿ ಕೋವಿಡ್ ನೆಗೆಟಿವ್ ವರದಿ ಬಂದಿತ್ತು. ಆಕೆಯ ಚೇತರಿಕೆಯ ನಂತರ ಫೆಬ್ರವರಿ 20, 2020ರಂದು ಆಕೆಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು.