ನವದೆಹಲಿ: ಮಧ್ಯ ಪ್ರದೇಶದ ಇಂದೋರ್ ಸತತ ಆರನೇ ಬಾರಿಗೆ ದೇಶದ ಸ್ವಚ್ಛ ನಗರಿ ಎಂಬ ಪಟ್ಟ ಅಲಂಕರಿಸಿದೆ. ಗುಜರಾತ್ನ ಸೂರತ್ ಮತ್ತು ಮಹಾರಾಷ್ಟ್ರ ನವಿ ಮುಂಬೈ ನಂತರದ ಎರಡು ಸ್ಥಾನಗಳಲ್ಲಿ ಪಡೆದಿದೆ. ಇತ್ತ, ಆರನೇ ಸಲ ಸ್ವಚ್ಛ ನಗರಿ ಪ್ರಶಸ್ತಿ ಬಂದಿರುವುದಕ್ಕೆ ಇಂದೋರ್ ಜನ ಪಟಾಕಿ ಸಿಡಿಸಿ, ಕುಣಿದು ಕುಪ್ಪಳಿಸಿ ಸಂಭ್ರಮಿಸಿದ್ದಾರೆ.
ಕೇಂದ್ರ ಸರ್ಕಾರದ ವಾರ್ಷಿಕ ಸ್ವಚ್ಛ ಸರ್ವೇಕ್ಷಣಾ ಪ್ರಶಸ್ತಿ 2022ರನ್ನು ಪ್ರಕಟಿಸಲಾಗಿದೆ. ನವದೆಹಲಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಶಸ್ತಿಗಳನ್ನು ವಿತರಿಸಿದರು. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರಿದೀಪ್ ಸಿಂಗ್ ಪುರಿ ಮತ್ತು ಇತರರು ಭಾಗವಹಿಸಿದ್ದರು.
ಅತ್ಯುತ್ತಮ ರಾಜ್ಯಗಳ ವಿಭಾಗದಲ್ಲಿ ಮಧ್ಯಪ್ರದೇಶ ಮೊದಲ ಸ್ಥಾನ ಪಡೆದುಕೊಂಡರೆ, ಛತ್ತೀಸ್ಗಢ ಎರಡನೇ ಮತ್ತು ಮಹಾರಾಷ್ಟ್ರ ಮೂರನೇ ಸ್ಥಾನ ಪಡೆದಿವೆ. ಸ್ವಚ್ಛ ನಗರ ವಿಭಾಗದಲ್ಲಿ ಇಂದೋರ್ ಹಾಗೂ ಸೂರತ್ ತನ್ನ ಅಗ್ರ ಸ್ಥಾನಗಳನ್ನು ಉಳಿಸಿಕೊಂಡಿವೆ. ಕಳೆದ ಬಾರಿ ಮೂರನೇ ಸ್ಥಾನ ಪಡೆದಿದ್ದ ವಿಜಯವಾಡ ಈ ವರ್ಷ ಆ ಸ್ಥಾನವನ್ನು ಕಳೆದುಕೊಂಡು ನವಿ ಮುಂಬೈಗೆ ಬಿಟ್ಟುಕೊಟ್ಟಿದೆ.