ಭಾರತ ಸ್ವಾತಂತ್ರ್ಯಗೊಂಡು ನಾಳೆಗೆ 75 ವರ್ಷಗಳನ್ನು ಪೂರೈಸುತ್ತಿದೆ. 1947 ರಲ್ಲಿ ಬ್ರಿಟೀಷರ ಗುಲಾಮಗಿರಿಯಿಂದ ಹೊರಬಂದ ದೇಶದ ಮುಂದೆ ಪ್ರತಿ ಕ್ಷೇತ್ರದಲ್ಲೂ ದೊಡ್ಡ ದೊಡ್ಡದಾದ ಸಾಲು ಸಾಲು ಸವಾಲುಗಳಿದ್ದವು. ಆದ್ರೆ ರಾಷ್ಟ್ರೀಯ ನಾಯಕರ ದೂರದೃಷ್ಟಿಯಿಂದಾಗಿ ಸಾಮಾಜಿಕ, ಆರ್ಥಿಕ, ತಂತ್ರಜ್ಞಾನ ಸೇರಿದಂತೆ ಎಲ್ಲ ರಂಗಗಳಲ್ಲಿಯೂ ಪ್ರಗತಿ ಸಾಧಿಸುವ ಜೊತೆಗೆ ಹೊಸ ಹೊಸ ಸಾಧನೆಗಳನ್ನೂ ಮಾಡುತ್ತಾ ಇಂದು ಜಗತ್ತಿನೆದುರು ಭಾರತ ತನ್ನ ಶಕ್ತಿ ಸಾಬೀತುಪಡಿಸಿದೆ.
1947ರ ನಂತರದ 75 ವರ್ಷಗಳಲ್ಲಿ ದೇಶವು ಹಲವು ಮಹತ್ವದ ಸಾಧನೆಗಳನ್ನು ಮಾಡಿತು. ಜಾಗತಿಕ ಮಟ್ಟದಲ್ಲಿ ದೊರೆತ ಮನ್ನಣೆಯೂ ಒಂದು ದೊಡ್ಡ ಸಾಧನೆಯೇ. ಹಲವು ಸವಾಲುಗಳನ್ನು ಎದುರಿಸಿ ಇಂದು ದೇಶವು ತಲೆ ಎತ್ತಿ ನಿಂತಿದೆ. ಕೋಟ್ಯಂತರ ಜನರನ್ನು ಬಡತನದಿಂದ ಮೇಲಕ್ಕೆ ತಂದಿದೆ, ಅಕ್ಷರಸ್ಥರನ್ನಾಗಿಸಿದೆ ಮತ್ತು ವಿವಿಧ ರಂಗಗಳಲ್ಲಿ ದಾಪುಗಾಲಿರಿಸಿದೆ. ಸೂಪರ್ ಪವರ್ ಆಗುವ ಆಕಾಂಕ್ಷೆಯನ್ನೂ ತನ್ನೊಳಗೆ ಹುದುಗಿಸಿಕೊಂಡಿದೆ.
1. ಆರ್ಥಿಕ ಕ್ಷೇತ್ರದಲ್ಲಾದ ಬದಲಾವಣೆಗಳೇನು?: ಬ್ರಿಟೀಷರು ಭಾರತಕ್ಕೆ ಬಂದ ನಂತರ ಕೊಹಿನೂರು ವಜ್ರ ಸೇರಿದಂತೆ ಒಟ್ಟು 45 ಟ್ರಿಲಿಯನ್ ಡಾಲರ್ ಅನ್ನು ದೇಶದಿಂದ ಲೂಟಿ ಹೊಡೆದರು. ಭಾರತ ಸ್ವಾತಂತ್ರಗೊಂಡಾಗ ದೇಶದ ತಲಾದಾಯ 230 ರೂಪಾಯಿ ಆಗಿತ್ತು. ಬಡತನ, ಹಸಿವು ತಾಂಡವವಾಡುತ್ತಿತ್ತು. ತ್ವರಿತ ಕೈಗಾರಿಕೀಕರಣದಿಂದಾಗಿ ಅದರಲ್ಲೂ 1960 ರಲ್ಲಿ ಹಸಿರು ಕ್ರಾಂತಿ, 1970 ರಲ್ಲಾದ ಶ್ವೇತ ಕ್ರಾಂತಿ ಮತ್ತು ನೀಲಿ ಕ್ರಾಂತಿಯ ಬಳಿಕ ಮಹತ್ವದ ಬದಲಾವಣೆಯ ಶಖೆ ಉದಯಿಸಿತು. 1991 ರಲ್ಲಿ ವಿದೇಶಿ ವ್ಯಾಪಾರ, ಬ್ಯಾಂಕ್ಗಳ ಖಾಸಗೀಕರಣದತ್ತ ಮುಖ ಮಾಡಲಾಯಿತು. 75 ವರ್ಷಗಳ ಬಳಿಕ ವಿಶ್ವದ ಪ್ರಮುಖ ಆರ್ಥಿಕ ರಾಷ್ಟ್ರವಾಗಿ ಹೊರ ಹೊಮ್ಮಿ, ಅಭಿವೃದ್ಧಿ ಹೊಂದುತ್ತಿದೆ. 1947 ರಲ್ಲಿ 2.89 ಡಾಲರ್ ಆಗಿದ್ದ ತಲಾ ಆದಾಯ 75 ವರ್ಷಗಳ ಬಳಿಕ 1,980 ಡಾಲರ್ ತಲುಪಿದೆ. ಅಂದು ವಿದೇಶದಿಂದ ಹೆಚ್ಚಿನ ವಸ್ತುಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದ್ರೆ ಇಂದು ಭಾರತದ ಕಂಪನಿಗಳು ಜಾಗತಿಕ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿವೆ.
2. ಭೌಗೋಳಿಕ ಬದಲಾವಣೆ:1978 ರಲ್ಲಿ ಕಾಶ್ಮೀರಕ್ಕೆ ಪಾಕಿಸ್ತಾನ ಉಗ್ರರ ಒಳನುಸುಳುವಿಕೆ ಪ್ರಾರಂಭವಾಯಿತು. 1962 ರಲ್ಲಿ ಇಂಡೋ-ಚೀನಾ ಯುದ್ದ, 1999 ರಲ್ಲಿ ಕಾರ್ಗಿಲ್ ಯುದ್ಧ, ಪ್ರಸ್ತುತ ಲಡಾಖ್ ಗಡಿ ವಿವಾದ ನಡೆಯುತ್ತಿದ್ದರೂ ಸಹ ಪ್ರತಿ ಬಾರಿಯೂ ಭಾರತ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಮರ್ಥವಾಗಿದೆ ಎಂದು ಇಡೀ ಜಗತ್ತಿಗೆ ತೋರಿಸಿಕೊಟ್ಟಿದೆ.