ನವದೆಹಲಿ: ಮಾನವ ಸಂಪನ್ಮೂಲ ನಮ್ಮ ದೇಶದ ಅತಿದೊಡ್ಡ ಶಕ್ತಿಯಾಗಿದೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಜನರ ಸಾಮರ್ಥ್ಯದ ಮೇಲೆ ಅಪಾರ ನಂಬಿಕೆ ಇತ್ತು. ಇಂದು ದೇಶದ 1.4 ಬಿಲಿಯನ್ ನಾಗರೀಕರನ್ನು ಸಶಕ್ತಗೊಳಿಸುವುದು ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಾತ್ಮಕಗೊಳಿಸುವುದು ನಮ್ಮ ಆದ್ಯತೆ ಆಗಬೇಕು ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅಭಿಪ್ರಾಯಪಟ್ಟರು.
ಇಲ್ಲಿನ ಅಸೋಸಿಯೇಟೆಡ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಆಫ್ ಇಂಡಿಯಾ (ASSOCHAM) ಆಯೋಜಿಸಿದ್ದ ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ ಸ್ಮರಣಾರ್ಥ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾನವ ಸಂಪನ್ಮೂಲ ನಮ್ಮ ದೇಶದ ಅತಿದೊಡ್ಡ ಶಕ್ತಿಯಾಗಿದೆ. ಹೆಚ್ಚು ಪ್ರೇರಿತ ಮತ್ತು ಬದ್ಧತೆಯ ಕಾರ್ಯಪಡೆ ನಮ್ಮಲ್ಲಿದೆ. ಇದನ್ನು ಜಾಗತಿಕವಾಗಿ ಸ್ಪರ್ಧಾತ್ಮಕಗೊಳಿಸಲು ಮತ್ತು ಅವರ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ನಾವು ಕಾರ್ಯಪ್ರವೃತ್ತರಾಗಬೇಕಿದೆ ಎಂದು ಹೇಳಿದರು. ಎಲ್ಲೇ ಇರಿ, ಏನಾದರೂ ಮಾಡಿ, ನೀವು ಮಾಡುವ ಕಾರ್ಯವನ್ನು ನಿನ್ನೆಗಿಂತ ಉತ್ತಮವಾಗಿ ಮಾಡಿ. ಈ ಮೂಲಕ ಜೀವನದ ಎಲ್ಲಾ ಆಯಾಮಗಳಲ್ಲೂ ನಿರಂತರ ಸುಧಾರಣೆಗೆ ಮುಂದಾಗಿ ಎಂದು ಕರೆ ನೀಡಿದರು.
ವಿದೇಶದಲ್ಲಿರುವ ಭಾರತೀಯರ ಕೊಡುಗೆ ಬಗ್ಗೆ ಮಾತನಾಡಿದ ಅವರು, ಮಧ್ಯಪ್ರಾಚ್ಯದಲ್ಲಿನ ಕಾರ್ಮಿಕರು ಮಾತ್ರವೇ ನಮ್ಮ ಆರ್ಥಿಕತೆಗೆ ನೂರು ಬಿಲಿಯನ್ಗಿಂತ ಹೆಚ್ಚಿನ ಕೊಡುಗೆಯನ್ನು ನೀಡಿದ್ದಾರೆ. ಅಲ್ಲದೆ ನಾವು ಜಾಗತಿಕವಾಗಿ ಸ್ಪರ್ಧಾತ್ಮಕವಾಗಬೇಕಾದ ಅಗತ್ಯತೆ ಇದೆ. ಇದಕ್ಕಾಗಿ ನಮ್ಮ ಜನರು ಮತ್ತು ಕಂಪನಿಗಳು ಇನ್ನಷ್ಟು ಶ್ರಮ ಪಡಬೇಕು. ಜಾಗತಿಕ ಮಾರುಕಟ್ಟೆಯಲ್ಲಿ ಪ್ರಮುಖ ಸ್ಥಾನವನ್ನು ಪಡೆಯಲು ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳನ್ನು ನಾವು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.