ನವದೆಹಲಿ:ದೇಶದ ಅತಿದೊಡ್ಡ ಕಾರು ಕಳ್ಳನನ್ನು ಸೆರೆ ಹಿಡಿಯುವಲ್ಲಿ ರಾಜಧಾನಿ ದೆಹಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಳೆದ 27 ವರ್ಷಗಳ ಕಳ್ಳತನದ ಇತಿಹಾಸ ಹೊಂದಿರುವ ಈತ ದೇಶದ ವಿವಿಧೆಡೆ 5,000ಕ್ಕೂ ಹೆಚ್ಚು ಕಾರುಗಳನ್ನು ಎಗರಿಸಿದ್ದಾನೆ. ಈ ಆರೋಪಿಯ ಹೆಸರು ಅನಿಲ್ ಚೌಹಾಣ್(52). ದೆಹಲಿ, ಮುಂಬೈ ಮತ್ತು ಈಶಾನ್ಯ ರಾಜ್ಯಗಳಲ್ಲಿ ಈತ ಆಸ್ತಿಗಳನ್ನು ಹೊಂದಿದ್ದು, ಐಷಾರಾಮಿ ಜೀವನ ನಡೆಸುತ್ತಿದ್ದ ಪೊಲೀಸರು ಮಾಹಿತಿ ನೀಡಿದ್ದಾರೆ.
1995ಕ್ಕೂ ಮೊದಲು ದೆಹಲಿಯಲ್ಲಿ ಆಟೋ ರಿಕ್ಷಾ ಓಡಿಸಿಕೊಂಡು ಜೀವನ ನಡೆಸುತ್ತಿದ್ದ ಅನಿಲ್, ನಂತರ ಕಾರು ಕಳ್ಳತನ ಮಾಡಲು ಶುರು ಮಾಡಿದ್ದ. ಆರಂಭದ ದಿನಗಳಲ್ಲಿ ಮಾರುತಿ 800 ಕಾರುಗಳಿಗೇ ಹೆಚ್ಚು ಕಣ್ಣು ಹಾಕುತ್ತಿದ್ದನಂತೆ. ಹೀಗೆ ಕದ್ದ ವಾಹನಗಳನ್ನು ನೇಪಾಳ, ಜಮ್ಮು-ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳಲ್ಲಿ ಮಾರಾಟ ಮಾಡುತ್ತಿದ್ದನು. ಕಳ್ಳತನದ ಸಂದರ್ಭದಲ್ಲಿ ಕೆಲವು ಟ್ಯಾಕ್ಸಿ ಚಾಲಕರನ್ನು ಕೊಂದಿದ್ದಾಗಿಯೂ ಆರೋಪಿ ಬಾಯ್ಬಿಟ್ಟಿದ್ದಾನೆ.