ಜೈಪುರ/ಪೇಶಾವರ: ಪಾಕಿಸ್ತಾನದ ಮಹಿಳೆಯೊಬ್ಬಳು ತನ್ನ ಪ್ರಿಯಕರನ ಭೇಟಿಗೆಂದು ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದ ಘಟನೆ ಇತ್ತೀಚೆಗೆ ನಡೆದಿತ್ತು. ಪಾಕಿಸ್ತಾನದ ಸೀಮಾ ಗುಲಾಂ ಹೈದರ್ ತನ್ನ ನಾಲ್ವರು ಮಕ್ಕಳೊಂದಿಗೆ ಭಾರತಕ್ಕೆ ಆಗಮಿಸಿ ಪ್ರಿಯಕರ ಸಚಿನ್ ಮೀನಾನೊಂದಿಗೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ವಾಸವಾಗಿದ್ದಳು. ಈಕೆಯ ಬಗ್ಗೆ ತಿಳಿದ ಉತ್ತರ ಪ್ರದೇಶ ಪೊಲೀಸರು ಇಬ್ಬರನ್ನು ಬಂಧಿಸಿ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು.
ಈ ಪ್ರಕರಣದ ಬೆನ್ನಲ್ಲೇ ಇಂತಹುದೇ ಒಂದು ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಎರಡು ಮಕ್ಕಳ ತಾಯಿಯೊಬ್ಬಳು ತನ್ನ ಫೇಸ್‌ಬುಕ್ ಗೆಳೆಯನನ್ನು ಭೇಟಿ ಮಾಡಲು ಪಾಕಿಸ್ತಾನಕ್ಕೆ ತೆರಳಿದ್ದಾರೆ. ಉತ್ತರ ಪ್ರದೇಶದ ಕೈಲರ್ ಗ್ರಾಮದ ನಿವಾಸಿ, ಸದ್ಯ ರಾಜಸ್ಥಾನದ ಅಲ್ವರ್ ಜಿಲ್ಲೆಯಲ್ಲಿ ವಾಸವಾಗಿದ್ದ ಅಂಜು ಎಂಬ ಮಹಿಳೆಯೇ ಪಾಕಿಸ್ತಾನಕ್ಕೆ ತೆರಳಿದವರು.
ಗೆಳೆಯನ ಅರಸಿ ಪಾಕ್ಗೆ ತೆರಳಿದ ಎರಡು ಮಕ್ಕಳ ತಾಯಿ :34 ವರ್ಷ ಅಂಜು ಎಂಬ ಮಹಿಳೆಗೆ ಫೇಸ್ಬುಕ್ನಲ್ಲಿ 29 ವರ್ಷದ ನಸ್ರುಲ್ಲ ಎಂಬಾತನ ಪರಿಚಯವಾಗಿತ್ತು. ಇಬ್ಬರ ಪರಿಚಯ ಗಾಢ ಸ್ನೇಹಕ್ಕೆ ತಿರುಗಿದೆ. ಅಂಜು ತನ್ನ ಗೆಳೆಯ ನಸ್ರುಲ್ಲನನ್ನು ಭೇಟಿ ಮಾಡಲು ಪಾಕಿಸ್ತಾನಕ್ಕೆ ತೆರಳಿದ್ದರು. ಸದ್ಯ ಈ ಮಹಿಳೆಯು ಪಾಕಿಸ್ತಾನದ ಅಪ್ಪರ್ ದಿರ್ ಜಿಲ್ಲೆಯ ಖೈಬರ್ ಪಖ್ತುಂಖ್ವಾದಲ್ಲಿ ಇರುವುದಾಗಿ ತಿಳಿದುಬಂದಿದೆ. ಅಲ್ಲದೇ ಪಾಕಿಸ್ತಾನಿ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು, ಪಾಸ್ಪೋರ್ಟ್ ಪರಿಶೀಲನೆ ನಡೆಸಿ ಬಿಟ್ಟಿರುವ ಕುರಿತು ಮಾಹಿತಿ ಲಭ್ಯವಾಗಿದೆ.
ಫೇಸ್ಬುಕ್ನಲ್ಲಿ ಮೂಲಕ ಪ್ರೀತಿ :ಪಾಕಿಸ್ತಾನದ ನಸ್ರುಲ್ಲ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾನೆ. ಈತನಿಗೆ ಕಳೆದ ಕೆಲವು ತಿಂಗಳುಗಳ ಹಿಂದೆ ಫೇಸ್ಬುಕ್ನಲ್ಲಿ ಅಂಜು ಎಂಬ ಭಾರತೀಯ ಮಹಿಳೆಯ ಪರಿಚಯವಾಗಿದೆ. ಇದಾದ ನಂತರದ ಬೆಳವಣಿಗೆಯಲ್ಲಿ ತನ್ನ ಗೆಳೆಯ ನಸ್ರುಲ್ಲಾನನ್ನು ಭೇಟಿ ಮಾಡಲು ಪಾಕಿಸ್ತಾನಕ್ಕೆ ತೆರಳಲು ನಿರ್ಧರಿಸಿದ್ದ ಅಂಜು, ಪಾಸ್ಪೋರ್ಟ್ ಮತ್ತು ವಿವಿಧ ದಾಖಲೆಗಳೊಂದಿಗೆ ಆ ದೇಶಕ್ಕೆ ತೆರಳಿದ್ದಳು. ಈ ಬಗ್ಗೆ ಮಾಹಿತಿ ನೀಡಿರುವ ಪಾಕ್ ಪೊಲೀಸ್ ಅಧಿಕಾರಿಗಳು, ಅಂಜು ಮತ್ತು ಆಕೆಯ ಗೆಳೆಯನನ್ನು ಈಗಾಗಲೇ ವಶಕ್ಕೆ ಪಡೆದು ದಾಖಲೆಗಳನ್ನು ಪರಿಶೀಲನೆ ನಡೆಸಿ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಕಾನೂನುಬದ್ಧವಾಗಿ ಪಾಕಿಸ್ತಾನಕ್ಕೆ ತೆರಳಿದ ಮಹಿಳೆ :ಈ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ಎಚ್ಚೆತ್ತ ರಾಜಸ್ಥಾನ ಪೊಲೀಸರು ಭಿವಾಡಿಯಲ್ಲಿರುವ ಅಂಜು ಮನೆಗೆ ತೆರಳಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಮಾಹಿತಿ ನೀಡಿದ ಅಂಜು ಪತ್ನಿ ಅರವಿಂದ್, "ಪತ್ನಿ ಕಳೆದ ಗುರುವಾರ ಜೈಪುರಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದಳು. ಗೆಳತಿಯನ್ನು ಭೇಟಿ ಮಾಡಲು ಹೋಗುತ್ತಿರುವುದಾಗಿ ಹೇಳಿದ್ದಳು. ಇದಾದ ನಂತರ ಪಾಕಿಸ್ತಾನಕ್ಕೆ ತೆರಳಿರುವುದು ಗೊತ್ತಾಗಿದೆ. ಕಳೆದ ಕೆಲವು ದಿನಗಳ ಹಿಂದೆ ವಾಟ್ಸ್ ಆ್ಯಪ್ನಲ್ಲಿ ಮಾತನಾಡಿದೆ. ಈ ಸಂದರ್ಭದಲ್ಲಿ ಆಕೆ ಪಾಕಿಸ್ತಾನದ ಲಾಹೋರ್ನಲ್ಲಿ ಇರುವುದು ತಿಳಿಯಿತು" ಎಂದರು.