ತಿರುವನಂತಪುರಂ (ಕೇರಳ): ರಷ್ಯಾ-ಉಕ್ರೇನ್ ನಡುವಿನ ಸಂಘರ್ಷದಿಂದ ಅರ್ಧದಲ್ಲೇ ಓದು ಬಿಟ್ಟು ಸ್ಥಳಾಂತರವಾದ ಭಾರತೀಯ ವಿದ್ಯಾರ್ಥಿಗಳಿಗೆ ರಷ್ಯಾದಲ್ಲಿ ಅಡ್ಮಿಷನ್ ನೀಡಲು ನಿರ್ಧರಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ ಹಿಂದಿನ ಶೈಕ್ಷಣಿಕ ವರ್ಷದಿಂದ ವಂಚಿತರಾಗದಂತೆ ನೋಡಿಕೊಳ್ಳುವ ದೃಷ್ಟಿಯಿಂದ ರಷ್ಯಾದ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ನೀಡಲಾಗುವುದು ಎಂದು ನವದೆಹಲಿಯಲ್ಲಿರುವ ರಷ್ಯಾದ ರಾಯಭಾರಿ ಕಚೇರಿಯ ಉಪ ಮುಖ್ಯಸ್ಥ ರೋಮನ್ ಬಾಬುಶ್ಕಿನ್ ತಿಳಿಸಿದರು.
ಫೆಬ್ರುವರಿಯಿಂದಲೂ ಉಕ್ರೇನ್ ಮತ್ತು ರಷ್ಯಾ ಯುದ್ಧ ನಡೆಯುತ್ತಿದೆ. ಇದರಿಂದ ಉಕ್ರೇನ್‌ನಲ್ಲಿ ಶಿಕ್ಷಣ ಪಡೆಯುತ್ತಿದ್ದ ಭಾರತದ 20 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಅರ್ಧದಲ್ಲೇ ಶಿಕ್ಷಣ ಮೊಟಕುಗೊಳಿಸಿ ತವರಿಗೆ ಮರಳಿದ್ದಾರೆ. ಈ ವಿದ್ಯಾರ್ಥಿಗಳ ಭವಿಷ್ಯದ ಕುರಿತ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು, ಭಾರತೀಯ ವಿದ್ಯಾರ್ಥಿಗಳಿಗೆ ರಷ್ಯಾದ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ನೀಡಲಾಗುವುದು. ರಷ್ಯಾದಲ್ಲಿ ವಿದ್ಯಾರ್ಥಿಗಳು ಈ ಹಿಂದಿನ ವರ್ಷ ಬಿಟ್ಟುಹೋದ ಕೋರ್ಸ್‌ಗಳನ್ನು ಮುಂದುವರಿಸಬಹುದು ಎಂದು ಹೇಳಿದರು.