ಕೀವ್(ಉಕ್ರೇನ್):ಉಕ್ರೇನ್ನ ಖಾರ್ಕಿವ್ ನಗರದ ಮೇಲೆ ಇಂದು ಬೆಳಗ್ಗೆ ರಷ್ಯಾ ಸೇನೆ ನಡೆಸಿರುವ ವೈಮಾನಿಕ ಶೆಲ್ ದಾಳಿಯಲ್ಲಿ ಕರ್ನಾಟಕದ ವಿದ್ಯಾರ್ಥಿ ಸಾವಿಗೀಡಾಗಿದ್ದಾನೆ. ಮೃತಪಟ್ಟಿರುವ ವಿದ್ಯಾರ್ಥಿಯನ್ನು ಹಾವೇರಿ ಜಿಲ್ಲೆಯ ನಿವಾಸಿ ನವೀನ್ ಶೇಖರಪ್ಪ ಗ್ಯಾನಗೌಡರ್(21) ಎಂದು ಗುರುತಿಸಲಾಗಿದೆ.
ದಿನಸಿ ಖರೀದಿಗೆ ಕ್ಯೂನಲ್ಲಿ ನಿಂತಾಗ ರಷ್ಯಾ ಶೆಲ್ ದಾಳಿ: ಖಾರ್ಕಿವ್‌ನಲ್ಲಿ ಹಾವೇರಿಯ ವಿದ್ಯಾರ್ಥಿ ಸಾವು - Russian military assault
ಉಕ್ರೇನ್ ಮೇಲೆ ರಷ್ಯಾ ನಡೆಸಿರುವ ಭೀಕರ ದಾಳಿಯಲ್ಲಿ ಕರ್ನಾಟಕದ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆಂದು ಭಾರತೀಯ ವಿದೇಶಾಂಗ ಸಚಿವಾಲಯ ತಿಳಿಸಿದೆ.
ವಿದ್ಯಾರ್ಥಿ ಖಾರ್ಕಿವ್‌ನಲ್ಲಿ ನವೀನ್ ವೈದ್ಯಕೀಯ ವಿಜ್ಞಾನದಲ್ಲಿ 4 ನೇ ವರ್ಷದ ವ್ಯಾಸಂಗ ಮಾಡುತ್ತಿದ್ದನೆಂದು ತಿಳಿದು ಬಂದಿದೆ. ಇಂದು ಬೆಳಗ್ಗೆ ಮನೆಗೆ ಅಗತ್ಯ ಸಾಮಗ್ರಿ ತರಲು ಹೊರಗಡೆ ಹೋಗಿದ್ದ ವೇಳೆ ಇದ್ದಕ್ಕಿದ್ದಂತೆ ಶೆಲ್ ಬಂದಪ್ಪಳಿಸಿತು. ಪರಿಣಾಮ, ನವೀನ್ ಸಾವಿಗೀಡಾಗಿದ್ದಾನೆ ಎಂದು ತಿಳಿದುಬಂದಿದೆ. ಇನ್ನು ನವೀನ್ ಪ್ರತಿ ದಿನ 3-4 ಬಾರಿ ಮನೆಗೆ ದೂರವಾಣಿ ಮೂಲಕ ಸಂಪರ್ಕಿಸಿ ಮಾತನಾಡುತ್ತಿದ್ದನು ಎಂಬ ಮಾಹಿತಿ ಲಭ್ಯವಾಗಿದೆ.
ಈ ವಿಚಾರವನ್ನು ಭಾರತೀಯ ವಿದೇಶಾಂಗ ಇಲಾಖೆ ಟ್ವೀಟ್ ಮೂಲಕ ಸ್ಪಷ್ಟಪಡಿಸಿದೆ. 'ಉಕ್ರೇನ್ನ ಖಾರ್ಕಿವ್‌ನಲ್ಲಿ ಬೆಳಗ್ಗೆ ನಡೆದ ಶೆಲ್ ದಾಳಿಯ ವೇಳೆ ಭಾರತೀಯ ವಿದ್ಯಾರ್ಥಿಯೋರ್ವ ಸಾವಿಗೀಡಾಗಿರುವುದು ಅತ್ಯಂತ ದುಃಖದ ವಿಚಾರ. ವಿದ್ಯಾರ್ಥಿಯ ಪೋಷಕರ ಜೊತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸಂಪರ್ಕದಲ್ಲಿದೆ' ಎಂದು ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಗ್ಚಿ ಮಾಹಿತಿ ನೀಡಿದ್ದಾರೆ.