ನವದೆಹಲಿ:ದೇಶಕ್ಕೆ ಆಪತ್ತು ಬಂದಾಗ ಎದೆಯೊಡ್ಡಿ ಕಾಪಾಡುವವನೇ ಯೋಧ. ದೇಶ ನಿಶ್ಚಿಂತೆಯಿಂದಿರಲು ಗಡಿಯಲ್ಲಿ ಆತ ಕಾವಲು ಕಾಯುತ್ತಿರುತ್ತಾನೆ. ಆದರೆ, ಇಂತಹ ಯೋಧ ಪರದೇಶಕ್ಕೆ ಮಾರಾಟವಾದರೆ ಇಡೀ ರಾಷ್ಟ್ರವೇ ಅಪಾಯಕ್ಕೆ ಸಿಲುಕುತ್ತದೆ. ಚೀನಾ ಗಡಿಯಲ್ಲಿ ನಿಯೋಜಿಸಿದ್ದ ಭಾರತೀಯ ಯೋಧನೊಬ್ಬ ಪಾಕಿಸ್ತಾನಕ್ಕೆ ನಮ್ಮ ಸೇನೆಯ ರಹಸ್ಯ ಮಾಹಿತಿಯನ್ನು ಹಂಚಿಕೊಳ್ಳುತ್ತಿರುವ ಆರೋಪದ ಮೇಲೆ ಆತನ ವಿರುದ್ಧ ಸೇನಾ ವಿಚಾರಣೆ ನಡೆಸಲಾಗುತ್ತಿದೆ.
ಚೀನಾ ಮತ್ತು ಭಾರತಕ್ಕೆ ಸೇರಿದ ಉತ್ತರ ಗಡಿಯಲ್ಲಿ ನಿಯೋಜಿಸಲಾಗಿದ್ದ ಯೋಧನೊಬ್ಬ(ಸಿಗ್ನಲ್‌ಮ್ಯಾನ್) ಅಲ್ಲಿನ ಸೇನಾ ನೆಲೆಯ ರಹಸ್ಯ ಮಾಹಿತಿಯನ್ನು ಪಾಕಿಸ್ತಾನದ ರಾಯಭಾರಿ ಕಚೇರಿಯ ಐಎಸ್ಐ ಏಜೆಂಟ್ಗೆ ಕೇವಲ 15000 ರೂಪಾಯಿಗೆ ರವಾನಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ಆತನನ್ನು ಬಂಧಿಸಲಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಯಲ್ಲಿ ಐಎಸ್ಐ ಏಜೆಂಟ್ ಒಬ್ಬಾತನಿಗೆ ಭಾರತದ ಯೋಧ ನಮ್ಮ ಸೇನಾ ಗೌಪ್ಯ ವಿಚಾರಗಳು, ಗಡಿಯ ನೆಲೆಗಳ ಬಗ್ಗೆ ರಹಸ್ಯವಾಗಿ ಮಾಹಿತಿ ಹಂಚಿಕೊಳ್ಳುತ್ತಿದ್ದ. ಈ ವೇಳೆ ಆತನನ್ನು ಹಿಡಿಯಲಾಗಿದೆ. ಸೇನಾ ನಿಯಮಗಳಂತೆ ಆತನ ವಿರುದ್ಧ ವಿಚಾರಣೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
15 ಸಾವಿರಕ್ಕಾಗಿ ಸೇನಾ ಮಾಹಿತಿ ಹಂಚಿಕೆ:ಪಾಕ್ಗೆ ಏಜೆಂಟ್ ಎಂದು ಹೇಳಲಾದ ಅಬಿದ್ ಹುಸೇನ್ ಅಲಿಯಾಸ್ ನಾಯಕ್ ಅಬಿದ್ ಎಂಬ ಗೂಢಾಚಾರಿಗೆ ಚೀನಾ ಗಡಿಯಲ್ಲಿ ಸಿಗ್ನಲ್‌ಮ್ಯಾನ್ ಆಗಿ ಕೆಲಸ ಮಾಡುವ ಆರೋಪಿ ಯೋಧ ಸೇನೆಯ ರಹಸ್ಯ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದ. ಇದಕ್ಕಾಗಿ ದೇಶದ್ರೋಹಿ ಯೋಧನಿಗೆ ಪಾಕಿಸ್ತಾನದ ರಾಯಭಾರಿ ಕಚೇರಿಯ ಅಧಿಕಾರಿಗಳು 15,000 ರೂ. ನೀಡಿದ್ದರು ಎಂದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಉತ್ತರ ಗಡಿಯಲ್ಲಿ ಚೀನಾ ಸೇನೆ ಆಕ್ರಮಣಕಾರಿಯಾಗಿ ವರ್ತಿಸುತ್ತಿರುವ ನಡುವೆಯೇ ಯೋಧನ ಈ ಕುಕೃತ್ಯ ಬೆಳಕಿಗೆ ಬಂದಿದೆ. ಪಾಕ್ ಮೂಲಕ ಚೀನಾ ನಮ್ಮ ದೇಶದ ಸೇನಾ ಮಾಹಿತಿಯನ್ನು ಕಲೆ ಹಾಕುತ್ತಿರುವ ಶಂಕೆ ವ್ಯಕ್ತವಾಗಿದೆ. ಈ ನಿರ್ಣಾಯಕ ಕಾಲಘಟ್ಟದಲ್ಲಿ ಭಾರತದ ಸೇನೆಯ ಸಣ್ಣ ಮಾಹಿತಿಯೂ ಕೂಡ ಕುತಂತ್ರಿ ಚೀನಾಕ್ಕೆ ದೊಡ್ಡ ನೆರವು ನೀಡಬಲ್ಲದು ಎಂಬ ಆತಂಕ ವ್ಯಕ್ತವಾಗಿದೆ.