ನವದೆಹಲಿ: ಭಾರತೀಯ ವಿಜ್ಞಾನಿಯೊಬ್ಬರು ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿದ್ದಾರೆ. ಈ ತಂತ್ರಜ್ಞಾನದ ಮೂಲಕ ಟರ್ಬೈನ್ ಬ್ಲೇಡ್‌ಗಳು, ಅಚ್ಚುಗಳು ಮತ್ತು ಏರೋಸ್ಪೇಸ್ಗೆ ಸಂಬಂಧಿಸಿದ ವಸ್ತುಗಳನ್ನು ಕಡಿಮೆ ಮಾನವ ಸಂಪನ್ಮೂಲವನ್ನು ಬಳಸಿ ದುರಸ್ತಿ ಮಾಡಬಹುದು ಮತ್ತು ಮರುಸ್ಥಾಪನೆ ಮಾಡಬಹುದಾಗಿದೆ.
ಐಐಟಿ ಬಾಂಬೆಯ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಪ್ರೊಫೆಸರ್ ರಮೇಶ್ ಕುಮಾರ್ ಸಿಂಗ್ ಅವರು ಲೇಸರ್ ಆಧಾರಿತ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ ಮತ್ತು ಈ ತಂತ್ರಜ್ಞಾನದ ಬಳಕೆಯಲ್ಲಿ ಮಾನವನ ಹಸ್ತಕ್ಷೇಪ ಕಡಿಮೆಯಾಗಿರುತ್ತದೆ.
ಈ ತಂತ್ರಜ್ಞಾನ ಹೆಚ್ಚು ಮಹತ್ವ ಪಡೆದುಕೊಳ್ಳಲಿದೆ. ಅನೇಕ ಯಂತ್ರಗಳ ದುರಸ್ತಿಯ ವಿಚಾರದಲ್ಲಿ ಆತ್ಮನಿರ್ಭರ್ ಭಾರತ್ ವ್ಯವಸ್ಥೆಯನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಬಹುದಾದ ಪರಿಸರ ವ್ಯವಸ್ಥೆ ನಿರ್ಮಾಣ ಮಾಡುತ್ತದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಪ್ರಕಟಣೆ ಶುಕ್ರವಾರ ತಿಳಿಸಿದೆ.
ಭಾರತದಲ್ಲಿ ಈಗ ವೆಲ್ಡಿಂಗ್ ಮತ್ತು ಥರ್ಮಲ್ ಸ್ಪ್ರೇಯಿಂಗ್ ಹಾಗೂ ಇತರ ದುರಸ್ತಿ ತಂತ್ರಗಳಿವೆ. ಈ ತಂತ್ರಗಳು ತಾತ್ಕಾಲಿಕವಾಗಿರುತ್ತವೆ ಮತ್ತು ನಿಖರತೆಯನ್ನು ಒದಗಿಸುವುದಿಲ್ಲ. ಅದರ ಜೊತೆಗೆ ಈ ಎಲ್ಲ ತಂತ್ರಗಳು ಹಸ್ತಚಾಲಿತವಾಗಿರುತ್ತವೆ. ವ್ಯಕ್ತಿಯ ಕೌಶಲ್ಯ ದುರಸ್ತಿಯ ಗುಣಮಟ್ಟವನ್ನು ನಿರ್ಧಾರ ಮಾಡುತ್ತದೆ. ಆದರೆ, ಹೊಸ ತಂತ್ರಜ್ಞಾನ ಭಿನ್ನವಾಗಿದ್ದು, ದುರಸ್ತಿ ಗುಣಮಟ್ಟ ಉತ್ತಮವಾಗಿರುತ್ತದೆ.