ನವದೆಹಲಿ:ದೇಶವು 16ನೇ ರಾಷ್ಟ್ರಪತಿಗಳ ಆಯ್ಕೆಯ ಹೊಸ್ತಿಲಲ್ಲಿದೆ. ಮುಂದಿನ ಅಧ್ಯಕ್ಷರಾಗಿ ಬುಡಕಟ್ಟು ಸಮುದಾಯದ ದ್ರೌಪದಿ ಮುರ್ಮು ಆಯ್ಕೆ ನಿಚ್ಚಳವಾಗಿದೆ. ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೇರಲು ಇರುವ ಅರ್ಹತೆ, ಜೀವನ ಶೈಲಿ, ಸಂಬಳ, ಅವರಿಗಿರುವ ಸವಲತ್ತುಗಳು ಹಾಗು ಗೌರವ ದೇಶದ ಬೇರಾವ ಹುದ್ದೆಗೂ ಇರುವುದಿಲ್ಲ. ರಾಷ್ಟ್ರಪತಿಗಳಾದವರು ಕರ್ತವ್ಯ, ಹಕ್ಕುಗಳು ಅವರ ಸಂಬಳ ಮತ್ತು ರಜೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ತಿಳಿದುಕೊಳ್ಳೋಣ.
ರಾಷ್ಟ್ರಪತಿ ಹುದ್ದೆಗೇರುವ ಅರ್ಹತೆಗಳೇನು?
- ಭಾರತದ ಪ್ರಜೆಯಾಗಿರಬೇಕು
- 35 ವರ್ಷಗಳಾಗಿರಬೇಕು
- ಲೋಕಸಭೆ ಸದಸ್ಯರಿಗಿರುವ ಎಲ್ಲ ಅರ್ಹತೆಗಳು ಕಡ್ಡಾಯ
- ಸರ್ಕಾರಿ, ಖಾಸಗಿ ನಿಯಂತ್ರಣಕ್ಕೆ ಒಳಪಟ್ಟ ಲಾಭದಾಯಕ ಹುದ್ದೆಯಲ್ಲಿರಬಾರದು
ಸಂಬಳ:ರಾಷ್ಟ್ರಪತಿಗಳು ಪ್ರತಿ ತಿಂಗಳು 5 ಲಕ್ಷ ರೂಪಾಯಿಗಳ ಸಂಬಳವನ್ನು ಪಡೆಯುತ್ತಾರೆ. ವೇತನವನ್ನು 1951 ರ ಅಧ್ಯಕ್ಷರ ಸಾಧನೆ ಮತ್ತು ಪಿಂಚಣಿ ಕಾಯ್ದೆಯಡಿ ನಿರ್ಧರಿಸಲಾಗುತ್ತದೆ. ದೇಶದಲ್ಲಿಯೇ ಅತಿ ಹೆಚ್ಚು ಸಂಭಾವನೆ ಪಡೆಯುವ ಏಕೈಕ ಸರ್ಕಾರಿ ಅಧಿಕಾರಿ ಇವರಾಗಿರುತ್ತಾರೆ. 2018 ರಲ್ಲಿ ಅಧ್ಯಕ್ಷರ ವೇತನವನ್ನು 1,50 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಲಾಯಿತು. ಮಾಸಿಕ ಸಂಬಳದ ಹೊರತಾಗಿ ರಾಷ್ಟ್ರಪತಿಗಳು ಹಲವಾರು ಭತ್ಯೆಗಳನ್ನೂ ಪಡೆಯುತ್ತಾರೆ.
ರಾಷ್ಟ್ರಪತಿ ಭವನದಲ್ಲಿ ನಿವಾಸ:ಇದು ವಿಶ್ವದಲ್ಲಿಯೇ ಅತಿ ದೊಡ್ಡ ನಿವಾಸವಾಗಿದೆ. 1929 ರಲ್ಲಿ ಇದನ್ನು ನಿರ್ಮಿಸಲಾಗಿದೆ. 340 ಕೋಣೆಗಳ ಅಧಿಕೃತ ನಿವಾಸದಲ್ಲಿ ಸ್ವಾಗತ ಸಭಾಂಗಣಗಳು, ಅತಿಥಿ ಕೊಠಡಿಗಳು, ಉದ್ಯಾನಗಳು, ದೊಡ್ಡ ತೆರೆದ ಸ್ಥಳಗಳು, ಅಂಗರಕ್ಷಕ ಮತ್ತು ಸಿಬ್ಬಂದಿ, ಅಶ್ವಶಾಲೆಗಳು, ಕಚೇರಿಗಳು ಇವೆ.