ನವ ದೆಹಲಿ:ಪ್ರತಿ ವರ್ಷ ಡಿಸೆಂಬರ್ 4 ರಂದು ಭಾರತೀಯ ನೌಕಾಪಡೆಯ ದಿನವನ್ನು ಗೌರವದಿಂದ ಆಚರಿಸಲಾಗುತ್ತದೆ. 1971ರಲ್ಲಿ ಭಾರತೀಯ ನೌಕಾಪಡೆ 'ಆಪರೇಷನ್ ಟ್ರೈಡೆಂಟ್' ಅಡಿಯಲ್ಲಿ ಪಾಕಿಸ್ತಾನಿ ನೌಕಾಪಡೆಯನ್ನು ಸೆದೆಬಡಿದಿತ್ತು. ಅಂದಿನಿಂದ ಇಲ್ಲಿಯವರೆಗೆ ನೌಕಾ ಪಡೆಗಳ ಪಾತ್ರ ಮತ್ತು ಸಾಧನೆಗಳನ್ನು ಗುರುತಿಸಿ ಅವರಿಗೆ ಅಭಿನಂದನೆ ಸಲ್ಲಿಸುವ ನಿಟ್ಟಿನಲ್ಲಿ ಭಾರತೀಯ ನೌಕಾ ದಿನಾಚರಣೆ ನಡೆಯುತ್ತದೆ.
ಹುತಾತ್ಮರಿಗೆ ಗೌರವ:ನವದೆಹಲಿಯರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿಂದು ನೌಕಾಪಡೆಯ ಮುಖ್ಯಸ್ಥ ಆರ್.ಹರಿಕುಮಾರ್, ಸಿಡಿಎಸ್ ಜನರಲ್ ಅನಿಲ್ ಚೌಹಾಣ್, ಐಎಎಫ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ.ಆರ್ ಚೌಧರಿ ಮತ್ತು ಲೆಫ್ಟಿನೆಂಟ್ ಜನರಲ್ ಬಿ.ಎಸ್ ರಾಜು ಹುತಾತ್ಮರಿಗೆ ಗೌರವ ಸಲ್ಲಿಸಿದರು.
ಶುಭ ಕೋರಿದ ಪ್ರಧಾನಿ:ಈ ಕುರಿತು ವಿಡಿಯೋ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, 'ನಮ್ಮ ನೌಕಾಪಡೆಯ ಧೈರ್ಯಶಾಲಿ ಸಿಬ್ಬಂದಿ ರಾಷ್ಟ್ರೀಯ ಹಿತಾಸಕ್ತಿಗಳನ್ನು ಸಂರಕ್ಷಿಸಲು ಬದ್ಧರಾಗಿದ್ದಾರೆ. ಧೀರ ಯೋಧರ ತ್ಯಾಗಗಳಿಗೆ ನಾವು ಗೌರವ ಮತ್ತು ಕೃತಜ್ಞತೆ ಸಲ್ಲಿಸುತ್ತೇವೆ' ಎಂದಿದ್ದಾರೆ.
ಶ್ರೀಮಂತ ಕಡಲ ಇತಿಹಾಸದ ಬಗ್ಗೆ ಹೆಮ್ಮೆ:ಎಲ್ಲಾ ನೌಕಾ ಸಿಬ್ಬಂದಿ ಮತ್ತು ಅವರ ಕುಟುಂಬಗಳಿಗೆ ನೌಕಾಪಡೆಯ ದಿನದ ಶುಭಾಶಯಗಳು. ನಮ್ಮ ಶ್ರೀಮಂತ ಕಡಲ ಇತಿಹಾಸದ ಬಗ್ಗೆ ಹೆಮ್ಮೆಪಡುತ್ತೇವೆ. ಭಾರತೀಯ ನೌಕಾಪಡೆಯು ನಮ್ಮ ರಾಷ್ಟ್ರವನ್ನು ದೃಢವಾಗಿ ರಕ್ಷಿಸಿದೆ ಮತ್ತು ಸವಾಲಿನ ಸಮಯದಲ್ಲಿ ತನ್ನ ಮಾನವೀಯ ಮನೋಭಾವದಿಂದ ತನ್ನನ್ನು ತಾನು ಗುರುತಿಸಿಕೊಂಡಿದೆ ಎಂದು ನೌಕಾಪಡೆಯ ಮುಖ್ಯಸ್ಥ ಆರ್.ಹರಿ ಕುಮಾರ್ ಹೇಳಿದ್ದಾರೆ.
ಆಪರೇಷನ್ ಟ್ರೈಡೆಂಟ್ ಇತಿಹಾಸ:ಡಿ.3, 1971 ರ ಭಾರತದ ಗಡಿ ಪ್ರದೇಶ ಮತ್ತು ವಾಯುಪ್ರದೇಶದಲ್ಲಿ ಪಾಕಿಸ್ತಾನ ಸೇನೆ ದಾಳಿ ನಡೆಸಿದಾಗ ಭಾರತೀಯ ಸೇನೆಯು ಪ್ರತೀಕಾರವಾಗಿ ಆಪರೇಷನ್ ಟ್ರೈಡೆಂಟ್ ಪ್ರಾರಂಭಿಸಿತ್ತು. ಪಾಕಿಸ್ತಾನದ ವಾಣಿಜ್ಯ ರಾಜಧಾನಿಯಾಗಿದ್ದ ಕರಾಚಿ ಮೇಲೆ ಭಾರತದ ನೌಕಾ ಸೇನೆ ದಾಳಿ ಮಾಡಿತ್ತು. ಐಎನ್ಎಸ್ ನಿಪತ್, ಐಎನ್ಎಸ್ ನೀರ್ಘಾಟ್ ಮತ್ತು ಐಎನ್ಎಸ್ ವೀರ್ ಪಾಕಿಸ್ತಾನದ ಬಂದರುಗಳ ಮೇಲೆ ದಾಳಿ ಮಾಡಿದ್ದವು. ಕಮಾಂಡರ್ ಬಿ. ಬಿ ಯಾದವ್ ನೇತೃದ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆ ವಿಜಯ ಸಾಧಿಸಿತ್ತು.
ಭಾರತೀಯ ನೌಕಾಪಡೆಯ ದಿನದ ಇತಿಹಾಸ: ಭಾರತೀಯ ನೌಕಾಪಡೆಯನ್ನು 1612 ರಲ್ಲಿ ಈಸ್ಟ್ ಇಂಡಿಯಾ ಕಂಪನಿ ಸ್ಥಾಪಿಸಿತು. ಸ್ವಾತಂತ್ರ್ಯಕ್ಕೂ ಮೊದಲು ಭಾರತೀಯ ನೌಕಾಪಡೆಯನ್ನು 'ರಾಯಲ್ ಇಂಡಿಯನ್ ನೇವಿ' ಎಂದು ಕರೆಯಲಾಗುತ್ತಿತ್ತು. ಆದರೆ ನಂತರ ಅದರ ಹೆಸರನ್ನು ಭಾರತೀಯ ನೌಕಾಪಡೆ ಎಂದು ಬದಲಾಯಿಸಲಾಗಿದೆ. ಮರಾಠ ಚಕ್ರವರ್ತಿ 'ಛತ್ರಪತಿ ಶಿವಾಜಿ ಭೋಸ್ಲೆ' ಅವರನ್ನು 'ಭಾರತೀಯ ನೌಕಾಪಡೆಯ ಪಿತಾಮಹ' ಎಂದು ಕರೆಯಲಾಗುತ್ತದೆ.