ನವದೆಹಲಿ: ಅಸನಿ ಚಂಡಮಾರುತದಿಂದಾಗಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಕರಾವಳಿ ಪ್ರದೇಶಗಳಲ್ಲಿ ಭಾರಿ ಮಳೆ ಮತ್ತು ಅತೀ ವೇಗವಾಗಿ ಗಾಳಿ ಬೀಸುತ್ತಿದೆ. ಇದು ಮುಂದಿನ 12 ಗಂಟೆಗಳಲ್ಲಿ ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಅಸನಿ ಚಂಡಮಾರುತದಿಂದಾಗಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಕರಾವಳಿ ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಭಾನುವಾರ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂತರ - ದ್ವೀಪ ಹಡಗು ಸೇವೆಗಳು ಮತ್ತು ಚೆನ್ನೈ ಹಾಗೂ ವಿಶಾಖಪಟ್ಟಣಂನೊಂದಿಗಿನ ಹಡಗು ಸೇವೆಗಳನ್ನು ನಿಲ್ಲಿಸಲಾಗಿದೆ. ವರ್ಷದ ಮೊದಲ ಸೈಕ್ಲೋನಿಕ್ ಚಂಡ ಮಾರುತವು ದ್ವೀಪಸಮೂಹಕ್ಕೆ ಸಮೀಪಿಸಿರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಓದಿ:ಹಾವೇರಿಯ ಸ್ವಗ್ರಾಮದಲ್ಲಿ ವಿದ್ಯಾರ್ಥಿ ನವೀನ್ ಅಂತಿಮ ಕಾರ್ಯಕ್ಕೆ ಸಕಲ ಸಿದ್ಧತೆ
ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಮಾರ್ಚ್ 21 ರಂದು (ಇಂದು) ಅಂಡಮಾನ್ ದ್ವೀಪಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಮತ್ತು ನಿಕೋಬಾರ್ ದ್ವೀಪಗಳ ಕೆಲವು ಸ್ಥಳಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಆಗ್ನೇಯ ಬಂಗಾಳ ಕೊಲ್ಲಿ ಮತ್ತು ದಕ್ಷಿಣ ಅಂಡಮಾನ್ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಮುಂದಿನ 12 ಗಂಟೆಗಳಲ್ಲಿ ಚಂಡಮಾರುತ ತೀವ್ರಗೊಳ್ಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಾರ್ಚ್ 22 ರವರೆಗೆ ಬಂಗಾಳ ಕೊಲ್ಲಿ, ಅಂಡಮಾನ್ ಸಮುದ್ರ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಪೂರ್ವ - ಮಧ್ಯ, ಈಶಾನ್ಯ ಬಂಗಾಳ ಕೊಲ್ಲಿಯಲ್ಲಿ ಮೀನುಗಾರಿಕೆಗೆ ತೆರಳದಂತೆ ಮೀನುಗಾರರಿಗೆ ಹವಾಮಾನ ಇಲಾಖೆ ಸೂಚಿಸಿದೆ. ಅಂಡಮಾನ್ ಮತ್ತು ನಿಕೋಬಾರ್ ಮುಖ್ಯ ಕಾರ್ಯದರ್ಶಿ ಜಿತೇಂದ್ರ ನರೇನ್ ಚಂಡಮಾರುತದ ದೃಷ್ಟಿಯಿಂದ ಮಾರ್ಚ್ 22 ರವರೆಗೆ ಎಲ್ಲಾ ಪ್ರವಾಸೋದ್ಯಮ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದ್ದಾರೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಅಸನಿ ಚಂಡಮಾರುತ ಅಪ್ಪಳಿಸುವ ಹಿನ್ನೆಲೆ ನಮ್ಮ ಹಡಗುಗಳು ರಕ್ಷಣಾ ಕಾರ್ಯಕ್ಕೆ ಸಿದ್ಧವಾಗಿವೆ ಎಂದು ಇಂಡಿಯನ್ ಕೋಸ್ಟ್ ಗಾರ್ಡ್ ತಿಳಿಸಿದೆ.