ಕೋಟದ್ವಾರ್(ಉತ್ತರಾಖಂಡ): ಟರ್ಕಿಯಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಮೃತಪಟ್ಟ ಭಾರತೀಯ ಪ್ರಜೆಯ ಮೃತದೇಹವನ್ನು ಹೊರ ತೆಗೆಯಲಾಗಿದೆ. ಅವರು ತಂಗಿದ್ದ ಹೋಟೆಲ್‌ನ ಅವಶೇಷಗಳಿಂದ ಶನಿವಾರ ಅವರ ಕಳೆಬರಹವನ್ನು ಮೇಲೆತ್ತಲಾಗಿದೆ. ಫೆಬ್ರವರಿ 6 ರಂದು ಸಂಭವಿಸಿದ ಭೂಕಂಪದಲ್ಲಿ ಸಿಕ್ಕಿರುವ ಏಕೈಕ ಭಾರತೀಯ ಮೃತದೇಹ ಇದಾಗಿದೆ. ವಿಜಯ್ ಕುಮಾರ್ ಪೊಖ್ರಿಯಾಲ್ (35) ಎಂಬುವವರ ಶವ ಇದಾಗಿದೆ ಎಂದು ಪತ್ತೆ ಹಚ್ಚಲಾಗಿದೆ. ಶನಿವಾರ ಮುಂಜಾನೆ ಮಲತ್ಯ ನಗರದ ಪೂರ್ವ ಅನಟೋಲಿಯಾ ಪ್ರದೇಶದ ಬಹುಮಹಡಿ ಹೋಟೆಲ್ ಅವಶೇಷಗಳಡಿ ಈ ಮೃತದೇಹ ಪತ್ತೆಯಾಗಿತ್ತು.
ರಕ್ಷಣಾ ಸ್ಥಳದಿಂದ ಕಳುಹಿಸಲಾದ ಛಾಯಾಚಿತ್ರಗನ್ನು ಉತ್ತರಾಖಂಡ್‌ನಲ್ಲಿರುವ ವಿಜಯ್ ಅವರ ಕುಟುಂಬವು ನೋಡುತ್ತಿದ್ದರು. ಈ ವೇಳೆ ಮೃತಪಟ್ಟ ವ್ಯಕ್ತಿಯ ಎಡಗೈಯಲ್ಲಿ ಇರುವ ಹಚ್ಚೆ ಮೂಲಕ ಅವರ ದೇಹವನ್ನು ಗುರುತಿಸಲಾಗಿದೆ. ಕುಮಾರ್ ಅವರು ಜನವರಿ 23, 2023 ರಿಂದ ಟರ್ಕಿಯ ಇದೇ ಹೋಟೆಲ್‌ನಲ್ಲಿ ತಂಗಿದ್ದರು. ಅವರು ಫೆಬ್ರವರಿ ಮಧ್ಯದವರೆಗೆ ಟರ್ಕಿಯಲ್ಲಿ ಇರಬೇಕಾಗಿತ್ತು.
ಬೆಂಗಳೂರು ಮೂಲದ ಕಂಪನಿಯೊಂದಿಗೆ ನಂಟು: ಕುಮಾರ್, ಬೆಂಗಳೂರು ಮೂಲದ ಆಕ್ಸಿಪ್ಲಾಂಟ್ಸ್ ಇಂಡಿಯಾದ ಗ್ಯಾಸ್ ಪೈಪ್‌ಲೈನ್ ಅಳವಡಿಕೆ ಎಂಜಿನಿಯರ್ ಆಗಿದ್ದರು. ಈ ಕಂಪನಿ ಪೀಣ್ಯ ಇಂಡಸ್ಟ್ರಿಯಲ್ ಎಸ್ಟೇಟ್ ನಲ್ಲಿ ಕಾರ್ಯನಿರ್ವಹಿಸುತ್ತದೆ. ಉತ್ತರಾಖಂಡದ ಕೋಟದ್ವಾರದ ವಿಜಯ್ ಕುಮಾರ್ ಭೂಕಂಪ ಆಗಿದ್ದ ದಿನದಿಂದ ನಾಪತ್ತೆಯಾಗಿದ್ದರು. ಆದರೆ ಇಂದು ವಿಜಯ್ ಕುಮಾರ್ ಮೃತದೇಹ ಅವಶೇಷಗಳ ಅಡಿ ಪತ್ತೆಯಾಗಿದೆ. ಇನ್ನು ಅವರ ಪಾಸ್‌ಪೋರ್ಟ್ ಮತ್ತು ಇತರ ವಸ್ತುಗಳ ಮೂಲಕ ಕುಮಾರ್ ಬಗ್ಗೆ ಮಾಹಿತಿ ಗೊತ್ತಾಗಿದೆ. ಹೋಟೆಲ್ ಅವಶೇಷಗಳ ಅಡಿ ಅವರ ದಾಖಲೆಗಳು ಪತ್ತೆಯಾದ ಬಳಿಕ ಕುಮಾರ್ ಅವರ ಬಗ್ಗೆ ಮಾಹಿತಿ ದೊರೆತಿದೆ. ಆ ಬಳಿಕ ಮನೆಯವರಿಗೆ ಮಾಹಿತಿ ನೀಡಿ ಮೃತದೇಹ ಪತ್ತೆ ಹಚ್ಚಲಾಗಿದೆ.
ವಿಜಯ್ ಮನೆಯವರು ಹೇಳುವುದಿಷ್ಟು:ವಿಜಯ್ ಅವರ ಹಿರಿಯ ಸಹೋದರ ಅರುಣ್ ಮಾತನಾಡಿ, ಟರ್ಕಿಯ ರಾಯಭಾರ ಕಚೇರಿಯಿಂದ ವಿಜಯ್ ಅವರ ದೇಹವನ್ನು ಹೋಟೆಲ್‌ನ ಅವಶೇಷಗಳಿಂದ ಹೊರತೆಗೆಯಲಾಗಿದೆ ಎಂಬ ಮಾಹಿತಿ ಸಿಕ್ಕಿದೆ ಎಂದು ತಿಳಿಸಿದ್ದಾರೆ. ವಿಜಯ್ ನಾಪತ್ತೆಯಾದಾಗಿನಿಂದ ಭಾರತೀಯ ರಾಯಭಾರಿ ಕಚೇರಿಯೊಂದಿಗೆ ಅರುಣ್ ನಿರಂತರ ಸಂಪರ್ಕದಲ್ಲಿದ್ದರು. ಮೂರು ದಿನಗಳಲ್ಲಿ ಮೃತದೇಹ ಭಾರತಕ್ಕೆ ತಲುಪಲಿದೆ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ
ಇದನ್ನು ಓದಿ:ಟರ್ಕಿ, ಸಿರಿಯಾ ಭೂಕಂಪದಲ್ಲಿ 24 ಸಾವಿರ ಸಾವು: 8ರ ಬಾಲಕಿ ರಕ್ಷಿಸಿದ ಭಾರತದ ತಂಡ