ಫರಿದಾಬಾದ್(ಹರಿಯಾಣ): ಪಾಕಿಸ್ತಾನಿ ಮತ್ತು ಅಫ್ಘಾನಿಸ್ತಾನದ ವಲಸಿಗರಿಗೆ ಭಾರತೀಯ ಪೌರತ್ವ ನೀಡುವ ಪ್ರಕ್ರಿಯೆ ಹರಿಯಾಣದ ಫರಿದಾಬಾದ್ ಜಿಲ್ಲೆಯಲ್ಲಿ ಭರದಿಂದ ಸಾಗಿದೆ. ಜಿಲ್ಲಾ ಡೆಪ್ಯುಟಿ ಕಮಿಷನರ್ ಜಿತೇಂದ್ರ ಯಾದವ್ ಅವರ ಪ್ರಕಾರ, ಇದುವರೆಗೆ 30ಕ್ಕೂ ಹೆಚ್ಚು ವಲಸಿಗರಿಗೆ ಪೌರತ್ವ ನೀಡಲಾಗಿದೆ.
ಪಾಕಿಸ್ತಾನದಿಂದ ವಲಸಿಗರಾದ ಡ್ಯಾನಿಶ್ ಮತ್ತು ಗೀತಾ ಅವರನ್ನು ಇಂದು ಭಾರತಕ್ಕೆ ಸೇರಿಸಿಕೊಳ್ಳುವುದರ ಜೊತೆಗೆ ಈ ಪಟ್ಟಿ ಬೆಳೆಯುತ್ತಿದೆ. 'ಭಾರತದ ಪೌರತ್ವ ಪಡೆಯುವುದು ನನಗೆ ಕನಸಾಗಿತ್ತು. ಅಲ್ಲಿನ (ಪಾಕಿಸ್ತಾನದಲ್ಲಿ) ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ' ಎಂದು ಡ್ಯಾನಿಶ್ ಹೇಳಿದರು. ಇವರು ಈಗಾಗಲೇ ಭಾರತದಲ್ಲಿ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ.
ಇದನ್ನೂ ಓದಿ : ದೇಶದಲ್ಲಿ ಕೋವಿಡ್ ಹೆಚ್ಚಳ: ದೆಹಲಿಯಲ್ಲಿ ವೀಕೆಂಡ್ ಕರ್ಫ್ಯೂ, ಪಂಜಾಬ್‌ನಲ್ಲಿ ನೈಟ್ ಕರ್ಫ್ಯೂ, ಮುಂಬೈ ಮತ್ತೆ ಲಾಕ್‌ಡೌನ್? ಕಂಪ್ಲೀಟ್ ರಿಪೋರ್ಟ್
'ತನಗಿಂತ ಮೊದಲು ತನ್ನ ಕುಟುಂಬ ಸದಸ್ಯರೆಲ್ಲರೂ ಪಾಕಿಸ್ತಾನದ ಬನ್ನು ಪ್ರದೇಶದಿಂದ ಭಾರತಕ್ಕೆ ವಲಸೆ ಬಂದಿದ್ದಾರೆ' ಎಂದು ಗೀತಾ ಹೇಳಿದರು.
ಪೌರತ್ವ ನೀಡುವ ಪ್ರಕ್ರಿಯೆ ನಡೆಸುತ್ತಿರುವ ಅಧಿಕಾರಿ ಯಾದವ್ ಮಾತನಾಡಿ, 'ಗೃಹ ಸಚಿವಾಲಯ ಮತ್ತು ಇಂಟೆಲಿಜೆನ್ಸ್ ಬ್ಯೂರೋ (ಐಬಿ) ದಿಂದ ವರದಿಗಳನ್ನು ಪಡೆದ ನಂತರ ಸ್ಕ್ರೀನಿಂಗ್ ಪ್ರಾರಂಭವಾಗುತ್ತದೆ ಮತ್ತು ಸಂಬಂಧಿತ ದಾಖಲೆಗಳನ್ನು ಸಾಬೀತುಪಡಿಸಿದರೆ ಮಾತ್ರ ಪೌರತ್ವ ನೀಡಲು ಅರ್ಜಿಗಳನ್ನು ಆಯ್ಕೆ ಮಾಡಲಾಗುತ್ತದೆ' ಎಂದು ಹೇಳಿದರು.
ಭಾರತೀಯ ಪೌರತ್ವ ಕಾಯ್ದೆ 1955 ಸೆಕ್ಷನ್ 16ರ ಅಡಿಯಲ್ಲಿ ರಾಜ್ಯದ 13 ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳಿಗೆ ನೀಡಲಾದ ಅಧಿಕಾರದ ಮೂಲಕ ಈ ಪ್ರಕ್ರಿಯೆ ನಡೆಯುತ್ತದೆ.