ಚೆನ್ನೈ, ತಮಿಳುನಾಡು: ಜರ್ಮನಿಯಿಂದ ಸ್ವದೇಶಕ್ಕೆ ಮರಳಿದ ಚೆಸ್ ಗ್ರ್ಯಾಂಡ್ ಮಾಸ್ಟರ್ ಪ್ರಜ್ಞಾನಂದ ಅವರಿಗೆ ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ನೀಡಲಾಯಿತು. ವಿಮಾನ ನಿಲ್ದಾಣದಲ್ಲಿ ಪ್ರಜ್ಞಾನಂದ ಅವರಿಗೆ ಹೂಗುಚ್ಛ ನೀಡಿ ಬರಮಾಡಿಕೊಳ್ಳಲಾಯಿತು.
ಹೌದು, ಭಾರತೀಯ ಚೆಸ್ ಗ್ರ್ಯಾಂಡ್ ಮಾಸ್ಟರ್ ಮತ್ತು 2023 ರ FIDE ವಿಶ್ವಕಪ್ ರನ್ನರ್ ಅಪ್ ಆರ್ ಪ್ರಜ್ಞಾನಂದ ಅವರು ದೇಶಕ್ಕೆ ಹಿಂದಿರುಗುತ್ತಿದ್ದಂತೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ಭವ್ಯವಾದ ಸ್ವಾಗತ ಕೋರಲಾಯಿತು. ಈ ವೇಳೆ, ವಿಮಾನ ನಿಲ್ದಾಣದಲ್ಲಿ ಡೊಳ್ಳು, ಬಾಜಾ-ಭಜಂತ್ರಿ ಮುಂತಾದ ವಾದ್ಯ, ಮೊಳಗಿದವು. ಅಷ್ಟೇ ಅಲ್ಲ ಪ್ರಜ್ಞಾನಂದ ಅವರನ್ನು ಬರಮಾಡಿಕೊಳ್ಳಲು ಸಹಪಾಠಿಗಳು, ಅಖಿಲ ಭಾರತ ಚೆಸ್ ಫೆಡರೇಶನ್ ಪ್ರತಿನಿಧಿಗಳು ಮತ್ತು ರಾಜ್ಯ ಸರ್ಕಾರದ ಪ್ರತಿನಿಧಿಗಳು ಸ್ಥಳದಲ್ಲಿ ಉಪಸ್ಥಿತರಿದ್ದರು.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಮಾನ ನಿಲ್ದಾಣದಲ್ಲಿ ಇಷ್ಟೊಂದು ಜನರನ್ನು ನೋಡಿ ನನಗೆ ತುಂಬಾನೇ ಸಂತೋಷವಾಗಿದೆ. ಇದು ನಿಜವಾಗಿಯೂ ಅದ್ಭುತ ಕ್ಷಣವಾಗಿದೆ. ಇದು ಚೆಸ್‌ಗೆ ಒಳ್ಳೆಯದು ಎಂದು ನಾನು ಭಾವಿಸುತ್ತೇನೆ ಎಂದು ಭಾರತೀಯ ಚೆಸ್ ಗ್ರ್ಯಾಂಡ್‌ಮಾಸ್ಟರ್ ಮತ್ತು 2023 ರ FIDE ವಿಶ್ವಕಪ್ ರನ್ನರ್-ಅಪ್ ಪ್ರಜ್ಞಾನಂದ ಅವರು ಹೇಳಿದರು.
ಚೆಸ್ ವಿಶ್ವಕಪ್ನಲ್ಲಿ ಪ್ರಜ್ಞಾನಂದ ರನ್ನರ್-ಅಪ್:ತೀವ್ರ ಕುತೂಹಲ ಕೆರಳಿಸಿದ್ದ ಫಿಡೆ ಚೆಸ್ ವಿಶ್ವಕಪ್ನಲ್ಲಿ ನಾರ್ವೆಯ ಮ್ಯಾಗ್ನಸ್ ಕಾರ್ಲ್ಸನ್ ಕೊನೆಗೂ ಚಾಂಪಿಯನ್ ಆಗಿ ಹೊರಹೊಮ್ಮಿದರು. ಗುರುವಾರ ಆಗಸ್ಟ್ 24ರಂದು ನಡೆದ ಟೈ-ಬ್ರೇಕ್ ಪಂದ್ಯದಲ್ಲಿ ಭಾರತದ ಆರ್.ಪ್ರಜ್ಞಾನಂದ ವೀರೋಚಿತ ಸೋಲು ಕಂಡರು. ಈ ಮೂಲಕ ಫಿಡೆ ಚೆಸ್ ವಿಶ್ವಕಪ್ ರನ್ನರ್ ಅಪ್ಗೆ ತೃಪ್ತಿಪಟ್ಟರು.
ವಿಶ್ವದ 2ನೇ ಶ್ರೇಯಾಂಕಿತ ಆಟಗಾರ ಹಿಕರು ನಕಮುರಾ ಹಾಗೂ 3ನೇ ಶ್ರೇಯಾಂಕಿತ ಆಟಗಾರ ಫ್ಯಾಬಿಯಾನೊ ಕರುವಾನಾ ಅವರನ್ನು ಮಣಿಸಿ ಪ್ರಜ್ಞಾನಂದ ಫೈನಲ್ಗೆ ಲಗ್ಗೆ ಇಟ್ಟಿದ್ದರು. ಫೈನಲ್ನಲ್ಲಿ ಅಗ್ರ ಶ್ರೇಯಾಂಕಿತ ಹಾಗೂ 5 ಬಾರಿಯ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್ಸನ್ ವಿರುದ್ಧ ಪ್ರಶಸ್ತಿ ಗೆಲ್ಲಲು ತೀವ್ರ ಹಣಾಹಣಿ ನಡೆಸಿದ್ದರು. ಎರಡು ದಿನಗಳ ಕಾಲ ಫೈನಲ್ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದ್ದೇ ಪ್ರಜ್ಞಾನಂದ ವೀರೋಚಿತ ಆಟಕ್ಕೆ ಸಾಕ್ಷಿಯಾಗಿತ್ತು.
ಇದೇ ಕಾರಣದಿಂದ ಮೂರನೇ ದಿನ ಟೈ-ಬ್ರೇಕ್ಗೆ ಪಂದ್ಯ ಸಾಗಿತ್ತು. ಈ ಪಂದ್ಯದಲ್ಲಿ ಗೆದ್ದಿದ್ದರೆ ಚೆಸ್ ವಿಶ್ವಕಪ್ ಗೆದ್ದ ಅತಿ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪ್ರಜ್ಞಾನಂದ ಪಾತ್ರರಾಗುತ್ತಿದ್ದರು. ಆದರೆ, 18 ವರ್ಷದ ಪ್ರಜ್ಞಾನಂದ ಒಡ್ಡಿದ್ದ ಕಠಿಣ ಸವಾಲನ್ನು 32 ವರ್ಷದ ಕಾರ್ಲ್ಸನ್ ಮೆಟ್ಟಿ ನಿಲ್ಲುವಲ್ಲಿ ಯಶಸ್ವಿಯಾದರು. ಟೈ-ಬ್ರೇಕ್ನ ಮೊದಲ ಪಂದ್ಯದಲ್ಲಿ 45 ನಡೆಗಳಿಂದ ಕಾರ್ಲ್ಸನ್ ಗೆದ್ದಿದ್ದರು. ಎರಡನೇ ಪಂದ್ಯ 22 ನಡೆಗಳೊಂದಿಗೆ ಡ್ರಾ ಕಂಡಿತ್ತು. ಆದರೆ, ಮೊದಲ ಪಂದ್ಯ ಗೆದ್ದಿದ್ದ ಕಾರ್ಲ್ಸನ್ ಎಚ್ಚರಿಕೆಯಿಂದ ಆಡುವ ಮೂಲಕ ಮೊದಲ ಚೆಸ್ ವಿಶ್ವಕಪ್ ಗೆದ್ದರು.
ಓದಿ:ವಿಶ್ವ ಚೆಸ್ ಚಾಂಪಿಯನ್ಶಿಪ್: ಪ್ರಜ್ಞಾನಂದಗೆ ವಿಡಿಯೋ ಕಾಲ್ ಮೂಲಕ ಅಭಿನಂದನೆ ಸಲ್ಲಿಸಿದ ಸಿಎಂ ಸ್ಟಾಲಿನ್