ನವದೆಹಲಿ: ಭಾರತ ಮತ್ತು ಚೀನಾದ ಸೈನ್ಯವು ಲಡಾಕ್‌ನ ಕೆಲವು ಪ್ರದೇಶಗಳಿಂದ ಹಿಂದೆ ಸರಿಯುತ್ತಿವೆ. ಈ ಸಂಬಂಧ ವಿಡಿಯೋ ಒಂದು ಬಿಡುಗಡೆಯಾಗಿದ್ದು, ವಿಡಿಯೋದಲ್ಲಿ ಎರಡೂ ದೇಶಗಳ ಟ್ಯಾಂಕ್‌ಗಳು ಮತ್ತು ಸೇನಾ ಸಿಬ್ಬಂದಿಗಳನ್ನು ಕಾಣಬಹುದಾಗಿದೆ.
ಕಳೆದ ಕೆಲವು ದಿನಗಳಿಂದ ಭಾರತ - ಚೀನಾ ಗಡಿಯಲ್ಲಿನ ಅಸ್ತವ್ಯಸ್ತತೆ ಕಡಿಮೆಯಾಗಿದೆ. ಪೂರ್ವ ಲಡಾಕ್‌ನ ಪ್ಯಾಂಗಾಂಗ್ ಸರೋವರದ ಉತ್ತರ ಮತ್ತು ದಕ್ಷಿಣ ಭಾಗಗಳಿಂದ ಸೈನ್ಯವನ್ನು ಹಿಂತೆಗೆದುಕೊಳ್ಳಲು ಭಾರತ ಮತ್ತು ಚೀನಾ ಒಪ್ಪಿಕೊಂಡಿವೆ ಎಂದು ಇಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂಸತ್ತಿನಲ್ಲಿ ತಿಳಿಸಿದ್ದಾರೆ. ಇದಕ್ಕೂ ಮುನ್ನ ಭಾರತ ಮತ್ತು ಚೀನಾದ ಪಡೆಗಳು ಹಿಂದೆ ಸರಿಯುತ್ತಿವೆ ಎಂದು ಚೀನಾದ ರಕ್ಷಣಾ ಸಚಿವಾಲಯ ತಿಳಿಸಿತ್ತು.
ವಿಡಿಯೋ ಬಿಡುಗಡೆ ಮಾಡಿದ ಭಾರತೀಯ ಸೇನೆ ಎರಡೂ ದೇಶಗಳ ಮಿಲಿಟರಿ ಅಧಿಕಾರಿಗಳು ಕೈಕುಲುಕುತ್ತಿರುವ ದೃಶ್ಯವನ್ನು ವಿಡಿಯೋದಲ್ಲಿ ನೋಡಬಹುದು. ಇದರ ನಂತರ ಭಾರತ ಮತ್ತು ಚೀನಾ ಸೈನ್ಯದ ಸೇನಾ ಟ್ಯಾಂಕ್‌ಗಳು ಒಂದೊಂದಾಗಿ ಹಿಂದೆ ಸರಿಯುತ್ತಿವೆ.
ಚೀನಾದೊಂದಿಗೆ ಮಾಡಿಕೊಂಡ ಒಪ್ಪಂದದ ಪ್ರಕಾರ, ಎರಡೂ ಕಡೆಯವರು ಅಲ್ಲಿ ನಿಯೋಜಿಸಲ್ಪಟ್ಟ ಸೇನೆಯನ್ನು ಹಂತಹಂತವಾಗಿ ತೆಗೆದುಹಾಕಲಾಗುತ್ತದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ . ಚೀನಾ ತನ್ನ ಸೈನ್ಯವನ್ನು ಹಿಂದೆಗೆದು ಫಿಂಗರ್ ಎಂಟಿನ ಪೂರ್ವಕ್ಕೆ ಉತ್ತರ ಭಾಗದಲ್ಲಿ ಇಡುತ್ತದೆ ಎಂದು ತಿಳಿಸಿದ್ದಾರೆ. ಹಾಗೆ ಭಾರತವು ತನ್ನ ಸೇನಾ ಘಟಕಗಳನ್ನು ಫಿಂಗರ್ III ಬಳಿಯ ತನ್ನ ಶಾಶ್ವತ ನೆಲೆ ಧನ್ ಸಿಂಗ್ ಥಾಪಾ ಪೋಸ್ಟ್‌ನಲ್ಲಿ ಇಡುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ದಕ್ಷಿಣದ ಅಂಚಿನ ಪ್ರದೇಶದಲ್ಲಿಯೂ ಎರಡೂ ಪಕ್ಷಗಳು ಇದೇ ರೀತಿಯ ಕ್ರಮ ಕೈಗೊಳ್ಳುತ್ತವೆ. ಈ ಕ್ರಮಗಳನ್ನು ಪರಸ್ಪರ ಒಪ್ಪಂದದ ಅಡಿಯಲ್ಲಿ ವಿಸ್ತರಿಸಲಾಗುವುದು ಮತ್ತು 2020 ರ ಏಪ್ರಿಲ್‌ನಿಂದ ಉತ್ತರ ಮತ್ತು ದಕ್ಷಿಣ ಭಾಗಗಳಲ್ಲಿ ಎರಡೂ ಪಕ್ಷಗಳು ಯಾವುದೇ ನಿರ್ಮಾಣವನ್ನು ಮಾಡಿದ್ದರೂ ಅವುಗಳನ್ನು ತೆಗೆದುಹಾಕಲಾಗುತ್ತದೆ ಮತ್ತು ಮರು ಹೊಂದಿಸಲಾಗುವುದು ಎಂದು ಸಿಂಗ್ ಮಾಹಿತಿ ನೀಡಿದ್ದಾರೆ.
ಕಳೆದ ಒಂಬತ್ತು ತಿಂಗಳಿಂದ ಪೂರ್ವ ಲಡಾಖ್‌ನ ಗಡಿಯಲ್ಲಿ ಉಭಯ ದೇಶಗಳ ನಡುವೆ ವೈಮನಸ್ಸು ಉಂಟಾಗಿತ್ತು. ಈ ಬಿಕ್ಕಟ್ಟನ್ನು ಕೊನೆಗೊಳಿಸಲು, ಸೆಪ್ಟೆಂಬರ್ 2020 ರಿಂದ ಮಿಲಿಟರಿ ಮತ್ತು ರಾಜತಾಂತ್ರಿಕ ಮಟ್ಟದಲ್ಲಿ ಎರಡೂ ಕಡೆಗಳಲ್ಲಿ ಹಲವಾರು ಮಾತುಕತೆಗಳು ನಡೆದಿದ್ದವು. ಸೇನಾ ಪಡೆಗಳನ್ನು ಹಿಂತೆಗೆದುಕೊಳ್ಳಲು ಹಿರಿಯ ಕಮಾಂಡರ್ ಮಟ್ಟದ ಬರೋಬ್ಬರಿ ಒಂಬತ್ತು ಸುತ್ತಿನ ಮಾತುಕತೆ ನಡೆಸಲಾಗಿದೆ ಎಂದು ರಕ್ಷಣಾ ಸಚಿವರು ಹೇಳಿದರು. ಇದಲ್ಲದೇ ರಾಜತಾಂತ್ರಿಕ ಮಟ್ಟದಲ್ಲಿಯೂ ಸಭೆಗಳು ನಡೆದಿವೆ ಎಂದರು.