ಶ್ರೀನಗರ:ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಕೋಕರ್‌ನಾಗ್ ಪ್ರದೇಶದಲ್ಲಿ ಬುಧವಾರ ಮಧ್ಯಾಹ್ನ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಭಾರತೀಯ ಸೇನೆಯ ಮೂವರು ಯೋಧರು ಹುತಾತ್ಮರಾಗಿದ್ದರು. ಇದೀಗ ಇಬ್ಬರು ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರನ್ನು ಸುತ್ತುವರೆದಿರುವುದಾಗಿ ಜಮ್ಮು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಕಾಶ್ಮೀರ ವಲಯ ಪೊಲೀಸರು 'ಎಕ್ಸ್'ನಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ. ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಮುನ್ನಡೆಯುತ್ತಿದ್ದ ಕರ್ನಲ್ ಮನ್‌ಪ್ರೀತ್ ಸಿಂಗ್, ಮೇಜರ್ ಆಶಿಶ್ ಧೋನಕ್ ಮತ್ತು ಡಿಎಸ್‌ಪಿ ಹುಮಾಯೂನ್ ಭಟ್ ಅವರ ಅಚಲ ಶೌರ್ಯಕ್ಕೆ ಗೌರವಪೂರ್ವಕ ಶ್ರದ್ಧಾಂಜಲಿ. ಉಝೈರ್ ಖಾನ್ ಸೇರಿದಂತೆ ಇಬ್ಬರು ಎಲ್‌ಇಟಿ ಭಯೋತ್ಪಾದಕರನ್ನು ಸುತ್ತುವರೆದಿದ್ದು ನಮ್ಮ ಪಡೆಗಳು ಅಚಲವಾದ ಸಂಕಲ್ಪದೊಂದಿಗೆ ಮುಂದುವರಿಯುತ್ತಿವೆ ಎಂದಿದ್ದಾರೆ.
ಮತ್ತೊಂದೆಡೆ, ಬುಧವಾರ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಎನ್‌ಕೌಂಟರ್ ನಡೆದ ಅನಂತನಾಗ್‌ನ ಕೋಕರ್‌ನಾಗ್ ಪ್ರದೇಶದ ದೃಶ್ಯಗಳು ಮತ್ತು ಹುತಾತ್ಮ ಡಿಎಸ್‌ಪಿ ಹುಮಾಯೂನ್ ಭಟ್ ನಿವಾಸದ ದೃಶ್ಯಗಳು ಸಿಕ್ಕಿವೆ. ಬುದ್ಗಾಮ್‌ನಲ್ಲಿ ಡಿಎಸ್‌ಪಿ ಹುಮಾಯೂನ್ ಮುಝಮ್ಮಿಲ್ ಭಟ್ ಅಂತ್ಯಕ್ರಿಯೆ ನೆರವೇರಿದೆ.
ಗೃಹಪ್ರವೇಶಕ್ಕೆ ಮಗನ ಆಗಮನಕ್ಕಾಗಿ ಕಾಯುತ್ತಿತ್ತು ಯೋಧನ ಕುಟುಂಬ:ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಮೇಜರ್ ಆಶಿಶ್ ಧೋನಕ್ ಹೊಸದಾಗಿ ತಮ್ಮ ಕನಸಿನ ಮನೆ ನಿರ್ಮಿಸಿದ್ದು ಗೃಹಪ್ರವೇಶಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದವು. ಕುಟುಂಬ ಮಗನಿಗಾಗಿ ಕಾಯುತ್ತಿತ್ತು. ಆದರೆ ಬುಧವಾರ ಭಯೋತ್ಪಾದಕರ ವಿರುದ್ಧ ನಡೆದ ಗುಂಡಿನ ದಾಳಿಯಲ್ಲಿ ವೀರ ಯೋಧ ಆಶಿಶ್ ಮೃತಪಟ್ಟರು. ಈ ಸುದ್ದಿ ಆಶಿಶ್ ಮನೆಯವರಿಗೆ ತಿಳಿದಿರಲಿಲ್ಲ. ಆದರೆ ಟಿವಿಯಲ್ಲಿ ಪ್ರಸಾರವಾದ ಸುದ್ದಿ ನೋಡಿ, ಮಗ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿರುವುದು ತಿಳಿದಿದೆ. ವಿಚಾರ ತಿಳಿದ ಕುಟುಂಬದಲ್ಲಿ ಒಂದೆಡೆ ಮಗ ಪರಮ ತ್ಯಾಗ ಮಾಡಿರುವ ಹೆಮ್ಮೆ, ಮತ್ತೊಂದೆಡೆ ಮನೆಮಗನನ್ನು ಕಳೆದುಕೊಂಡ ದುಃಖ ಆವರಿಸಿದೆ.
ಆಶಿಶ್ ಕುರಿತು ಅವರ ಚಿಕ್ಕಪ್ಪ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದರು. ಆಶಿಶ್ ಬಾಲ್ಯದಿಂದಲೂ ಭಾರತೀಯ ಸೇನೆ ಸೇರಲು ಆಸಕ್ತಿ ಹೊಂದಿದ್ದ. ಉತ್ತಮ ವಿದ್ಯಾರ್ಥಿಯಾಗಿದ್ದಲ್ಲದೇ ಕ್ರೀಡೆಯಲ್ಲಿಯೂ ಆಸಕ್ತಿ ಹೊಂದಿದ್ದನು. ಬ್ಯಾಡ್ಮಿಂಟನ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ. ಚಿಕ್ಕವನಿದ್ದಾಗಲೂ ಆಟಿಕೆ ಬಂದೂಕುಗಳೊಂದಿಗೆ ಆಟವಾಡುತ್ತಿದ್ದ. ತನ್ನನ್ನು ಸೈನಿಕ ಎಂದು ಕರೆಸಿಕೊಳ್ಳಲು ಇಷ್ಟಪಡುತ್ತಿದ್ದ. ಹಾಗೆಯೇ ಯೋಧ ಆಶಿಶ್ನ 2ನೇ ಚಿಕ್ಕಪ್ಪನ ಮಗ ಮೊದಲು ಲೆಫ್ಟಿನೆಂಟ್ ಆಗಿ ನೇಮಕಗೊಂಡಿದ್ದ. ಇದನ್ನು ನೋಡಿದ ಆಶಿಶ್ಗೂ ಲೆಫ್ಟಿನೆಂಟ್ ಆಗುವ ಕನಸಿತ್ತು. 2012ರಲ್ಲಿ, ಆಶಿಶ್ ಲೆಫ್ಟಿನೆಂಟ್ ಆಗಿ ನೇಮಕಗೊಂಡರು ಎಂದು ತಿಳಿಸಿದರು. ಆಶಿಶ್ 2015ರಲ್ಲಿ ಜಿಂದ್ ಅರ್ಬನ್ ಎಸ್ಟೇಟ್ ನಿವಾಸಿ ಜ್ಯೋತಿ ಅವರನ್ನು ವಿವಾಹವಾಗಿದ್ದು, ಎರಡೂವರೆ ವರ್ಷದ ಮಗಳಿದ್ದಾಳೆ. ದೇಶಕ್ಕಾಗಿ ಪ್ರಾಣ ಅರ್ಪಿಸಿದ ಆಶಿಶ್ ತನ್ನ ಕುಟುಂಬ, ತನ್ನ ಮುದ್ದಿನ ಮಗಳು ವಾಮಿಕಾಳನ್ನು ಅಗಲಿದ್ದಾರೆ.
ಲೆಫ್ಟಿನೆಂಟ್ ಗವರ್ನರ್ ಸಂತಾಪ: ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಎನ್‌ಕೌಂಟರ್‌ನಲ್ಲಿ ಹುತಾತ್ಮರಾದ ಯೋಧರಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. "ಅನಂತನಾಗ್‌ನಲ್ಲಿ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ಪ್ರಾಣತ್ಯಾಗ ಮಾಡಿದ ಡಿವೈಎಸ್ಪಿ ಹುಮಾಯೂನ್ ಭಟ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ಕರ್ನಲ್ ಮನ್‌ಪ್ರೀತ್ ಸಿಂಗ್ ಮತ್ತು ಮೇಜರ್ ಆಶಿಶ್ ಧೋನಕ್ ಅವರ ಅದಮ್ಯ ಧೈರ್ಯ ಮತ್ತು ಸರ್ವೋಚ್ಚ ತ್ಯಾಗಕ್ಕೆ ನಾನು ವಂದಿಸುತ್ತೇನೆ. ಈ ದುಃಖದ ಸಮಯದಲ್ಲಿ ಇಡೀ ರಾಷ್ಟ್ರ ಅವರ ಕುಟುಂಬಗಳೊಂದಿಗೆ ದೃಢವಾಗಿ ನಿಂತಿದೆ ಎಂದು ಎಲ್‌ಜಿ ಕಚೇರಿ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ.
ಇದನ್ನೂ ಓದಿ:ಜಮ್ಮು ಕಾಶ್ಮೀರ: ಎನ್‌ಕೌಂಟರ್‌ನಲ್ಲಿ ಹುತಾತ್ಮರಾದ ಡಿಎಸ್‌ಪಿ ಹುಮಾಯೂನ್ ಮುಜಾಮ್ಮಿಲ್ ಅಂತ್ಯಕ್ರಿಯೆ