ಅನಕಪಲ್ಲಿ (ಆಂಧ್ರಪ್ರದೇಶ): ರಜೆ ಮೇಲೆ ಬಂದಿದ್ದ ಯೋಧರೊಬ್ಬರ ಮೇಲೆ ನಡುರಸ್ತೆಯಲ್ಲಿ ಆಂಧ್ರಪ್ರದೇಶ ಪೊಲೀಸರು ಹಲ್ಲೆ ಮಾಡಿರುವ ಘಟನೆ ಅನಕಪಲ್ಲಿ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ. ಬಲವಂತವಾಗಿ ಸೈನಿಕನನ್ನು ಪೊಲೀಸ್ ಸಿಬ್ಬಂದಿ ಆಟೋದಲ್ಲಿ ಹತ್ತಿಸಿಕೊಂಡು ಕರೆದೊಯ್ಯುತ್ತಿರುವ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿವೆ. ಯೋಧನೊಂದಿಗೆ ಪೊಲೀಸರು ನಡೆದುಕೊಂಡ ಈ ದುರ್ವರ್ತನೆ ಬಗ್ಗೆ ಖಂಡನೆ ವ್ಯಕ್ತವಾಗಿದೆ.
ಸೈಯದ್ ಅಲಿಮುಲ್ಲಾ ಎಂಬುವವರೇ ಪೊಲೀಸರಿಂದ ದಾಳಿಗೆ ಒಳಗಾದ ಯೋಧ ಎಂದು ಗುರುತಿಸಲಾಗಿದೆ. ಅನಕಪಲ್ಲಿ ಜಿಲ್ಲೆಯ ಯಲಮಂಚಿಲಿ ಮಂಡಲದ ರೇಗುಪಾಲೆಂ ಮೂಲದ ಇವರು ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ 52 ರಾಷ್ಟ್ರೀಯ ರೈಫಲ್ಸ್ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ನವೆಂಬರ್ 2ರಂದು ರಜೆಯ ಮೇಲೆ ಊರಿಗೆ ಬಂದಿದ್ದರು.
ಮಂಗಳವಾರ ಪರವಾಡ ಮಂಡಲದ ಸಂತಬಯಲು ಎಂಬಲ್ಲಿ ಬಸ್‌ಗಾಗಿ ಸೈಯದ್ ಅಲಿಮುಲ್ಲಾ ಕಾಯುತ್ತಿದ್ದರು. ಈ ಸಂದರ್ಭದಲ್ಲಿ ಪೊಲೀಸ್ ಪೇದೆಗಳಾದ ಎಂ.ಮುತ್ಯಾಳನಾಯ್ಡು ಮತ್ತು ಶೋಭಾರಾಣಿ ಯೋಧನ ಬಳಿಗೆ ಬಂದು ದಿಶಾ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವಂತೆ ಹೇಳಿದ್ದಾರೆ. ಅಂತೆಯೇ, ಅಲಿಮುಲ್ಲಾ ತಮ್ಮ ಮೊಬೈಲ್ನಲ್ಲಿ ಆ್ಯಪ್ ಡೌನ್‌ಲೋಡ್ ಮಾಡಿಕೊಂಡಿದ್ದಾರೆ.
ಇದೇ ಪ್ರಕ್ರಿಯೆಯಲ್ಲಿ ಮೊಬೈಲ್ಗೆ ಒಟಿಪಿ ಬಂದಿದೆ. ಈ ಒಟಿಪಿ ಸಂಖ್ಯೆಯನ್ನು ಪೊಲೀಸ್ ಪೇದೆ ಕೇಳಿದ್ದಾರೆ. ಇದು ಸೈಬರ್ ವಂಚನೆಗೆ ಕಾರಣವಾಗಬಹುದು ಎಂದು ಯೋಧ ಅನುಮಾನಗೊಂಡಿದ್ದಾರೆ. ಹೀಗಾಗಿ ನೀವು ಪೊಲೀಸರು ಎನ್ನಲು ಪರಾವೆ ಏನು ನಿಮ್ಮ ಗುರುತಿನ ಕಾರ್ಡ್‌ಗಳನ್ನು ತೋರಿಸಿ ಎಂದು ಸೈಯದ್ ಅಲಿಮುಲ್ಲಾ ಕೇಳಿದ್ದಾರೆ. ಇದೇ ವಿಷಯವಾಗಿ ಆತನ ಮೇಲೆ ಪೊಲೀಸರು ವಾಗ್ವಾದಕ್ಕೆ ಇಳಿದಿದ್ದಾರೆ.