ಶ್ರೀನಗರ (ಜಮ್ಮು&ಕಾಶ್ಮೀರ):ಭಾರತೀಯ ಸೇನೆ ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಂಗ್‌ಧರ್ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಒಳನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸಿದ್ದಾರೆ ಮತ್ತು ಓರ್ವ ಭಯೋತ್ಪಾದಕನನ್ನು ಹತ್ಯೆಗೈದಿದ್ದಾರೆ. "ಭಯೋತ್ಪಾದಕರ ಒಳನುಸುಳುವಿಕೆಗೆ ಸಂಬಂಧಿಸಿದಂತೆ ಗುಪ್ತಚರ ಸಂಸ್ಥೆಗಳಿಂದ ಪಡೆದ ವಿಶ್ವಾಸಾರ್ಹ ಮಾಹಿತಿ ಆಧಾರದ ಮೇಲೆ ಮಾರ್ಚ್ 23-24 ರ ಮಧ್ಯರಾತ್ರಿಯಲ್ಲಿ ತಂಗ್‌ಧರ್ ಸೆಕ್ಟರ್‌ನಲ್ಲಿ ಹೊಂಚುದಾಳಿ ನಡೆಸಲಾಯಿತು" ಎಂದು ರಕ್ಷಣಾ ಇಲಾಖೆ ಪ್ರಕಟಣೆ ತಿಳಿಸಿದೆ.
ಬೆಳಗ್ಗೆ 4 ಗಂಟೆಗೆ, ಸಂದೇಹಾಸ್ಪದ ವ್ಯಕ್ತಿಯ ಚಲನವಲನವನ್ನು ಪತ್ತೆಹಚ್ಚಲಾಯಿತು. ಬಳಿಕ ಜಂಟಿ ಕಾರ್ಯಾಚರಣೆಯ ಭಾಗವಾಗಿ ಗಡಿ ನಿಯಂತ್ರಣ ರೇಖೆಯ ಭಾಗದಲ್ಲಿ ಸುಮಾರು 800 ಮೀಟರ್‌ಗಳಲ್ಲಿ ಓರ್ವ ನುಸುಳುಕೋರನನ್ನು ಹೊಡೆದುರುಳಿಸಲಾಯಿತು. ಆತನಿಂದ 03 x ಎಕೆ ರೈಫಲ್‌ಗಳು, 200ಕ್ಕೂ ಹೆಚ್ಚು ಸುತ್ತುಗಳ ಎಕೆ ರೈಫಲ್ಸ್ ರೌಂಡ್‌ಗಳು, 03 x ಪಿಸ್ತೂಲ್‌ಗಳು ಜತೆಗೆ 03 x ಮ್ಯಾಗಜೀನ್‌ಗಳು, 02 x ಚೈನೀಸ್ ಮಾದರಿಯ ಗ್ರೆನೇಡ್‌ಗಳು ಮತ್ತು ಔಷಧಿಗಳು, ಆಹಾರ ಪದಾರ್ಥಗಳು ಸೇರಿದಂತೆ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸೇನೆ ತಿಳಿಸಿದೆ.
"ಕಾಶ್ಮೀರದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕದಡಲು ಭಯೋತ್ಪಾದಕರಿಗೆ ಅವಕಾಶ ನೀಡದಿರಲು ಭಾರತೀಯ ಸೇನೆಯು ಎಲ್‌ಒಸಿಯಲ್ಲಿ ಜಾಗರೂಕವಾಗಿದೆ. ತನ್ನ ಕಾರ್ಯದಲ್ಲಿ ಸ್ಥಿರವಾಗಿರಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ" ಎಂದು ಸೇನೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಇಬ್ಬರು ಲಷ್ಕರ್ ಉಗ್ರರರ ಬಂಧನ:ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ಭದ್ರತಾ ಪಡೆಗಳ ಜಂಟಿ ಕಾರ್ಯಾಚರಣೆಯಲ್ಲಿ ಶುಕ್ರವಾರ ಇಬ್ಬರು ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಭಯೋತ್ಪಾದಕರನ್ನು ಬಂಡಿಪೋರಾದಲ್ಲಿ ಬಂಧಿಸಿದ್ದಾರೆ. "ಭಾರತೀಯ ಸೇನೆ (14 ಆರ್‌ಆರ್) ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ (3 ಬಿಎನ್) ಜತೆಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಫಿಶರೀಸ್ ಫಾರ್ಮ್ ಬಳಿಯ ಸುಮ್ಲಾರ್‌ನಲ್ಲಿ ನಾಕಾ ತಪಾಸಣೆ ನಡೆಸುತ್ತಿರುವಾಗ ಎಲ್‌ಇಟಿಯ ಇಬ್ಬರು ಭಯೋತ್ಪಾದಕ ಸಹಚರರನ್ನು ಬಂಧಿಸಿದ್ದಾರೆ. ಬಂಧಿತರಿಂದ ಎರಡು ಜೀವಂತ ಚೀನೀ ಗ್ರೆನೇಡ್‌ಗಳನ್ನು ವಶಪಡಿಸಿಕೊಂಡಿದ್ದಾರೆ" ಎಂದು ಬಂಡಿಪೋರಾ ಪೊಲೀಸರು ಟ್ವೀಟ್ ಮಾಡಿದ್ದಾರೆ. ಬಂಡಿಪೋರಾ ಪೊಲೀಸ್ ಠಾಣೆಯಲ್ಲಿ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಎಲ್ಇಟಿ ಭಯೋತ್ಪಾದಕನ ಸಹಚರ ಅರೆಸ್ಟ್: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಲಷ್ಕರ್-ಎ-ತೊಯ್ಬಾದ (ಎಲ್‌ಇಟಿ) ಉಪ ಸಂಘಟನೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ನ ಶಂಕಿತ ಉಗ್ರಗಾಮಿ ಸಹಚರನನ್ನು ಇತ್ತೀಚೆಗೆ(ಮಾ.15) ಭದ್ರತಾ ಪಡೆಗಳು ಬಂಧಿಸಿದ್ದವು. ಬಾರಾಮುಲ್ಲಾ ಪೊಲೀಸ್, ಸೇನೆಯ 29 ಆರ್‌ಆರ್ ಮತ್ತು 2 ಬಿಎನ್ ಎಸ್‌ಎಸ್‌ಬಿ ಜಂಟಿ ಪಡೆಗಳು ಸಿಂಗ್ ಪೋರಾ ಪಟ್ಟಣದಲ್ಲಿ ನಾಕಾ ತಪಾಸಣೆಯ ವೇಳೆ ಶಂಕಿತನನ್ನು ಬಂಧಿಸಿವೆ. "ಮತಿಪೋರಾ ಕಡೆಯಿಂದ ಫೆರಾನ್ (ಗೌನ್) ಧರಿಸಿದ್ದ ವ್ಯಕ್ತಿಯೊಬ್ಬ ನಾಕಾ ತಂಡವನ್ನು ನೋಡಿ ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸಿದ. ಈ ಸಂದರ್ಭದಲ್ಲಿ ಎಚ್ಚೆತ್ತ ತಂಡ ಹಿಂಬಾಲಿಸಿ ಜಾಣ್ಮೆಯಿಂದ ಬಂಧಿಸಿದೆ" ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಕಾಶ್ಮೀರ: ಎಲ್ಇಟಿ ಭಯೋತ್ಪಾದಕನ ಸಹಚರ ಅರೆಸ್ಟ್